ಅಂಗನವಾಡಿ, ಬಿಸಿಯೂಟ ನೌಕರರನ್ನು ಕಾಯಂ ಮಾಡಲು ಆಗ್ರಹ

KannadaprabhaNewsNetwork |  
Published : Jan 24, 2024, 02:04 AM IST
ಬಳ್ಳಾರಿಯಲ್ಲಿ ಪ್ರತಿಭಟನೆ ಜರುಗಿತು.  | Kannada Prabha

ಸಾರಾಂಶ

ಕಡಿಮೆ ಸಂಬಳದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಬಿಸಿಯೂಟ ನೌಕರರನ್ನು ದುಡಿಸಿಕೊಳ್ಳಲಾಗುತ್ತಿದೆ. ಗೌರವಧನ ಹೆಸರಿನಡಿ ವಂಚನೆ ಮಾಡಲಾಗುತ್ತಿದೆ.

ಬಳ್ಳಾರಿ: ಅಂಗನವಾಡಿ ಹಾಗೂ ಮಧ್ಯಾಹ್ನ ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ನಿವೃತ್ತಿ ವೇತನ ನೀಡಿ ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘ ಹಾಗೂ ಬಿಸಿಯೂಟ ನೌಕರರ ಸಂಘದಿಂದ(ಸಿಐಟಿಯು ಸಂಯೋಜಿತ) ಇಲ್ಲಿನ ನಗರೂರ್ ನಾರಾಯಣರಾವ್ ಪಾರ್ಕ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಕಡಿಮೆ ಸಂಬಳದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಬಿಸಿಯೂಟ ನೌಕರರನ್ನು ದುಡಿಸಿಕೊಳ್ಳಲಾಗುತ್ತಿದೆ. ಗೌರವಧನ ಹೆಸರಿನಡಿ ವಂಚನೆ ಮಾಡಲಾಗುತ್ತಿದೆ. ಅಂಗನವಾಡಿ ಹಾಗೂ ಬಿಸಿಯೂಟ ನೌಕರರನ್ನು ಕಾಯಂಗೊಳಿಸಬೇಕು. ಕನಿಷ್ಠ ವೇತನ ಜಾರಿಗೊಳಿಸಬೇಕು ಹಾಗೂ ನಿವೃತ್ತಿವೇತನ ಸೇರಿದಂತೆ ಸರ್ಕಾರಿ ನೌಕರರಿಗೆ ನೀಡುವ ಎಲ್ಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಅನೇಕ ವರ್ಷಗಳಿಂದ ಹೋರಾಟ ಮಾಡಲಾಗಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೌಕರರ ಹಿತ ಕಾಯುತ್ತಿಲ್ಲ. ನೌಕರರ ಸಂಬಳ ಹೆಚ್ಚಳ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಆಹಾರ, ಆರೋಗ್ಯ ಮತ್ತು ಶಿಕ್ಷಣಕ್ಕೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು. 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಕೊಡಲು ಕಾನೂನು ರೂಪಿಸಬೇಕು. ಸಮಾನ ಕೆಲಸಕ್ಕೆ ಸಮಾನವೇತನ ನೀತಿ ಜಾರಿಗೊಳಿಸಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಅಂಗನವಾಡಿಗಳಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಜೆ. ಸತ್ಯಬಾಬು, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಉಮಾದೇವಿ, ಜಿಲ್ಲಾ ಪ್ರಮುಖರಾದ ಈರಮ್ಮ, ಕಿರಣ್‌ಕುಮಾರಿ, ಗೀತಾ, ಯಮುನಾ, ರುದ್ರಮ್ಮ, ವಿಮಲಾ, ನೀಲಾವತಿ, ದುರ್ಗಮ್ಮ, ನಾಗರತ್ನ, ಖಾಜಾಬಿನ್ನಿ, ರೇಖಾ, ಓಂಕಾರಿ, ಅನ್ನಪೂರ್ಣ, ಭಾಗ್ಯ, ವಿಶಾಲಾಕ್ಷಿ, ಚೆನ್ನಮ್ಮ ಸೇರಿದಂತೆ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ