ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ಹಿಂಪಡೆಯಲು ಆಗ್ರಹ

KannadaprabhaNewsNetwork | Published : Apr 24, 2025 2:04 AM

ಸಾರಾಂಶ

ಪಾರದರ್ಶಕತೆ ಮತ್ತು ಅಗತ್ಯವಾದ ಸಮಾಲೋಚನೆಯಿಲ್ಲದೆ ಮಾಡಲಾದ ಈ ಶಿಫಾರಸುಗಳು ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತವೆ ಮತ್ತು ರಾಜ್ಯದ ನ್ಯಾಯದ ಪರಿಣಾಮಕಾರಿ ನಿರ್ವಹಣೆಗೆ ತಡೆ ಉಂಟುಮಾಡುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ: ಸುಪ್ರೀಂ ಕೋರ್ಟ್ ಕೋಲಿಜಿಯಂ ನಾಲ್ವರು ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ಏಕಪಕ್ಷೀಯವಾಗಿ ಮಾಡಿದ್ದು, ಇದನ್ನು ಕೂಡಲೇ ಹಿಂಪಡೆಯುವಂತೆ ಧಾರವಾಡ ಹೈಕೋರ್ಟ್ ಪೀಠದ ವಕೀಲರ ಸಂಘವು ಪ್ರತಿಭಟನೆ ನಡೆಸಿ ಸುಪ್ರಿಂ ಕೋರ್ಟ್‌ಗೆ ಮನವಿ ಮಾಡಿದೆ.

ಇಲ್ಲಿಯ ಹೈಕೋರ್ಟ್ ಆವರಣದಲ್ಲಿ ಬುಧವಾರ ವಕೀಲರ ಸಂಘದ ನೂರಾರು ಸದಸ್ಯರು ಸಭೆ ಸೇರಿ ನಂತರ ಪ್ರತಿಭಟನೆ ಕೂಡ ನಡೆಸಿದರು.

ಪಾರದರ್ಶಕತೆ ಮತ್ತು ಅಗತ್ಯವಾದ ಸಮಾಲೋಚನೆಯಿಲ್ಲದೆ ಮಾಡಲಾದ ಈ ಶಿಫಾರಸುಗಳು ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತವೆ ಮತ್ತು ರಾಜ್ಯದ ನ್ಯಾಯದ ಪರಿಣಾಮಕಾರಿ ನಿರ್ವಹಣೆಗೆ ತಡೆ ಉಂಟುಮಾಡುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತರ ರಾಜ್ಯಗಳಿಂದ ಮಾನ್ಯ ನ್ಯಾಯಮೂರ್ತಿಗಳನ್ನು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲು ಶಿಫಾರಸು ಮಾಡಲಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಈ ಶಿಫಾರಸನ್ನು ಜಾರಿಗೆ ತಂದಲ್ಲಿ ಅನುವಾದಿತ ದಾಖಲೆಗಳನ್ನು ಸಲ್ಲಿಸಲು ತೊಂದರೆ ಉಂಟಾಗಿ, ಪ್ರಕರಣಗಳ ತೀರ್ಪುಗಳಲ್ಲಿ ಹೆಚ್ಚಿನ ವಿಳಂಬ ಉಂಟಾಗುವ ಸಾಧ್ಯತೆ ಇದೆ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಡಿ. ಹಿರೇಮಠ ಆತಂಕ ವ್ಯಕ್ತಪಡಿಸಿದರು.

ಈ ಸಂಬಂಧ ಸಭೆ ಸೇರಿದ ವಕೀಲರು, ಸಮಿತಿಯ ಸದಸ್ಯರು ಮತ್ತು ಹಿರಿಯ ನ್ಯಾಯವಾದಿಗಳನ್ನೊಳಗೊಂಡ ಪ್ರತಿನಿಧಿ ಮಂಡಳಿಯನ್ನು ರಚಿಸಿ, ಸುಪ್ರೀಂ ಕೋರ್ಟ್ ಕೊಲಿಜಿಯಂನ ಮಾನ್ಯ ನ್ಯಾಯಮೂರ್ತಿಗಳ ಜತೆಗೂಡಿ, ಕೇಂದ್ರ ಕಾನೂನು ಸಚಿವರನ್ನು ಭೇಟಿಯಾಗಿ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿ, ನಾಲ್ಕು ನ್ಯಾಯಮೂರ್ತಿಗಳ ವರ್ಗಾವಣೆಯ ಶಿಫಾರಸನ್ನು ತಕ್ಷಣ ಹಿಂಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು.

ಅಲ್ಲದೇ ಈ ವಿಚಾರವನ್ನು ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಕೇಂದ್ರ ಕಾನೂನು ಸಚಿವರು ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಗಮನಕ್ಕೆ ತರಲು ಕೂಡ ವಕೀಲರು ನಿರ್ಧರಿಸಿದರು. ಅಷ್ಟೇಯಲ್ಲ, ಅಗತ್ಯ ಬಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ವಕೀಲರ ಸಂಘ ನಿರ್ಣಯಿಸಿದೆ ಎಂದು ಸಂಘದ ಅಧ್ಯಕ್ಷ ವಿ.ಎಂ. ಶೀಲವಂತ ಹೇಳಿದರು.

ಈ ವೇಳೆ ಉಪಾಧ್ಯಕ್ಷ ಸಂತೋಷ ಮಲಗೌಡರ್, ಕಾರ್ಯದರ್ಶಿ ಆನಂದ ಕೊಳ್ಳಿ, ಹಿರಿಯ ವಕೀಲರಾದ ಎಸ್.ಎಸ್. ಯಡ್ರಾಮಿ, ಜಗದೀಶ ಪಾಟೀಲ್, ಹರೀಶ ಮೈಗೂರ, ಶರ್ಮಿಳಾ ಪಾಟೀಲ, ಗಾಯತ್ರಿ ಎಚ್.ಆರ್, ಸುನೀಲ್ ದೇಸಾಯಿ, ಅವಿನಾಶ್ ಬಣಕಾರ್, ಹರ್ಷ ಪಾಟೀಲ್, ಕೆ.ಎಸ್. ಕೋರಿಶೆಟ್ಟರ್ ಸೇರಿದಂತೆ ಹಲವರಿದ್ದರು.

Share this article