ಕಂಪ್ಲಿ: 2025ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಂದರ್ಭದಲ್ಲಿ ಎದುರಾಗುತ್ತಿರುವ ಅನೇಕ ಅಡೆತಡೆಗಳು ಹಾಗೂ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಸರ್ಕಾರಿ ನೌಕರರು ಗುರುವಾರ ತಹಸೀಲ್ದಾರ್ ಜೂಗಲ ಮಂಜುನಾಯಕ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಎಚ್. ದೊಡ್ಡಬಸಪ್ಪ ಮಾತನಾಡಿ, ಈ ಬಾರಿಯ ಸಮೀಕ್ಷೆಗೆ ತಾಲೂಕು ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಕರು ಸೇರಿದಂತೆ ವಿವಿಧ ಇಲಾಖೆಗಳ 250ಕ್ಕೂ ಹೆಚ್ಚು ಸರ್ಕಾರಿ ನೌಕರರನ್ನು ಗಣತಿದಾರರನ್ನಾಗಿ ನೇಮಿಸಲಾಗಿದೆ. ಆದರೆ ಸಮೀಕ್ಷಾ ಕಾರ್ಯ ನಿರ್ವಹಿಸುವಾಗ ಅವರಿಗೆ ಅನೇಕ ತಾಂತ್ರಿಕ ಹಾಗೂ ಪ್ರಾಯೋಗಿಕ ತೊಂದರೆಗಳು ಎದುರಾಗುತ್ತಿವೆ. ಸಮೀಕ್ಷೆಗೆ ಬಳಸಲಾಗುತ್ತಿರುವ ಆ್ಯಪ್‌ನಲ್ಲಿ ಆಗಾಗ ತಾಂತ್ರಿಕ ದೋಷಗಳು ಕಾಣಿಸುತ್ತಿದ್ದು, ಡೇಟಾ ಅಪ್‌ಲೋಡ್ ಮಾಡುವಲ್ಲಿ ತೊಂದರೆ ಉಂಟಾಗುತ್ತಿದೆ. ಈ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಶಿಕ್ಷಕರನ್ನು ಅವರೇ ಬೋಧನೆ ನಡೆಸುತ್ತಿರುವ ಗ್ರಾಮ ಅಥವಾ ನಗರಗಳಲ್ಲಿಯೇ ಸಮೀಕ್ಷೆಗೆ ನಿಯೋಜಿಸಬೇಕು. ಬೇರೆಡೆ ನಿಯೋಜನೆ ಮಾಡುವುದರಿಂದ ಪ್ರಯಾಣ ಹಾಗೂ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆ ಉಂಟಾಗುತ್ತಿದೆ. ಒಬ್ಬ ಗಣತಿದಾರನಿಗೆ ಗರಿಷ್ಠ 150 ಮನೆಗಳಿಗಿಂತ ಹೆಚ್ಚು ಹೊರೆ ನೀಡಬಾರದು. ಅದಕ್ಕಿಂತ ಹೆಚ್ಚಿನ ಮನೆಗಳನ್ನು ನೀಡಿದರೆ ಸಮೀಕ್ಷೆಯ ಗುಣಮಟ್ಟ ಕುಗ್ಗುವ ಸಾಧ್ಯತೆ ಇದೆ. ಪ್ರತಿಯೊಂದು ಮನೆಯ ಸಮೀಕ್ಷೆಯಲ್ಲಿ ಕುಟುಂಬ ಮುಖ್ಯಸ್ಥರ ಹೆಸರು ಹಾಗೂ ಯುಎಚ್‌ಐಡಿ ಸಂಖ್ಯೆಯ ಭೌತಿಕ ಪ್ರತಿಯನ್ನು ಒದಗಿಸುವ ವ್ಯವಸ್ಥೆ ಇರಬೇಕು ಎಂದರು.
ವಯೋವೃದ್ಧರು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು, ಗಂಭೀರ ರೋಗಿಗಳಾದ ಸರ್ಕಾರಿ ನೌಕರರಿಗೆ ಸಮೀಕ್ಷಾ ಕರ್ತವ್ಯದಿಂದ ವಿನಾಯಿತಿ ನೀಡಬೇಕು. ಗಣತಿ ಕಾರ್ಯದಲ್ಲಿ ತಾಂತ್ರಿಕ ಅಥವಾ ಇತರ ತೊಂದರೆಗಳು ಎದುರಾದಲ್ಲಿ ತಕ್ಷಣ ಸ್ಪಂದಿಸುವ ಹಾಗೂ ಪರಿಹಾರ ಒದಗಿಸುವ ವಿಶೇಷ ಅಧಿಕಾರಿಗಳನ್ನು ಸರ್ಕಾರ ನೇಮಿಸಬೇಕು. ಅಲ್ಲದೆ, ಸಮೀಕ್ಷೆ ಹೆಚ್ಚು ಪರಿಣಾಮಕಾರಿಯಾಗಿ ನಡೆಯಲು ಪ್ರತಿ ಗಣತಿದಾರರೊಂದಿಗೆ ಆ ಗ್ರಾಮದ ಮಾಹಿತಿ ಚೆನ್ನಾಗಿ ತಿಳಿದಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಆಶಾ ಕಾರ್ಯಕರ್ತೆಯರ ಸಹಾಯ ಬಳಸಿಕೊಳ್ಳಬೇಕು ಎಂದು ಹೇಳಿದರು.ಸರ್ಕಾರಿ ನೌಕರರಾದ ಹನುಮಂತಪ್ಪ, ಮಂಜುನಾಥ, ಸುನೀತಾ ಪೂಜಾರಿ, ಸುಗ್ಗೇನಹಳ್ಳಿಯ ರಮೇಶ, ಚಂದ್ರಶೇಖರ ಇತರರಿದ್ದರು.