ಹುರುಳಿಕುಪ್ಪಿ ಗ್ರಾಮದ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Jul 31, 2024 1:00 AM

ಸಾರಾಂಶ

ಸವಣೂರು ತಾಲೂಕಿನ ಹುರುಳಿಕುಪ್ಪಿ ಗ್ರಾಮದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಗ್ರಾಮದಲ್ಲಿ ಪ್ರತಿಭಟಿಸಲಾಯಿತು.

ಹಾವೇರಿ: ಸವಣೂರು ತಾಲೂಕಿನ ಹುರುಳಿಕುಪ್ಪಿ ಗ್ರಾಮದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಗ್ರಾಮದಲ್ಲಿ ಪ್ರತಿಭಟಿಸಲಾಯಿತು.ಗ್ರಾಮದಲ್ಲಿರುವ ಕೆರೆಗೆ ಸವಣೂರು ತಾಲೂಕಿನ ಚರಂಡಿ ನೀರು ಬರುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಗ್ರಾಮಸ್ಥರು ಆರೋಪಿಸಿದರು. ಸಾರ್ವಜನಿಕ ಜಲಮೂಲವಾದ ಕೆರೆ ಒತ್ತುವರಿಯಾಗಿದ್ದು, ಅವುಗಳನ್ನು ತೆರವುಗೊಳಿಸಿ ಮತ್ತು ತಡೆಗೋಡೆ ನಿರ್ಮಿಸಿ ಜನಜಾನುವಾರುಗಳನ್ನು ರಕ್ಷಿಸಬೇಕು. ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಸಮರ್ಪಕವಾಗಿ ಜಾರಿಯಾಗಿರುವುದಿಲ್ಲ, ನೆನೆಗುದಿಗೆ ಬಿದ್ದಿರುವ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಿ ಪ್ರತಿ ಮನೆಗೂ ನೀರು ತಲುಪುವಂತೆ ಮಾಡಬೇಕು. ಗ್ರಾಮದಲ್ಲಿ ಕೆಟ್ಟಿರುವ ಚರಂಡಿ, ರಸ್ತೆ ಮತ್ತು ಸೇತುವೆಗಳನ್ನು ಹೊಸದಾಗಿ ನಿರ್ಮಿಸಿ ಗ್ರಾಮ ನೈರ್ಮಲ್ಯವನ್ನು ಕಾಪಾಡಬೇಕು. ಬೀದಿ ದೀಪವನ್ನು ಎಲ್ಲ ರಸ್ತೆಯಲ್ಲಿ ಅಳವಡಿಸಿ ರಾತ್ರಿ ಸಮಯದಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕು. ಅಂಗವಿಕಲರಿಗೆ ಪಂಚಾಯಿತಿ ಕಡೆಯಿಂದ ಯುಡಿಐಡಿ ಕಾರ್ಡ್ ವಿತರಿಸಿ, ಅವರಿಗೆ ಸರ್ಕಾರ ಕೊಡ ಮಾಡುವ ಎಲ್ಲಾ ಸೌಲಭ್ಯವನ್ನು ವಿತರಿಸಬೇಕು. ಸರ್ಕಾರ ಇತ್ತೀಚಿಗೆ ಪಶುಸಖಿ ಮತ್ತು ಕೃಷಿಸಖಿಯರನ್ನು ನೇಮಕ ಮಾಡಿದ್ದು, ಅವರಿಂದ ರೈತರಿಗೆ ದೊರೆಯಬೇಕಾದ ಸಹಾಯ ಒದಗಿಸಬೇಕು ಹಾಗೂ ಅವರಿಗೆ ಸೂಕ್ತ ಗೌರವಧನ ನೀಡಬೇಕು. ರೈತರಿಗೆ ರೈತ ಉತ್ಪಾದಕ ಸಂಘದಿಂದ ದೊರೆಯಬೇಕಾದ ಬಿತ್ತನೆ ಬೀಜ ಗೊಬ್ಬರ ಕೀಟನಾಶಕಗಳನ್ನು ಫಲಾನುಭವಿಗಳಿಗೆ ವಿತರಿಸಬೇಕು. ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ಸಾರ್ವಜನಿಕ ಆಸ್ತಿಗಳನ್ನು ಸಂರಕ್ಷಿಸಿ, ಒತ್ತುವರಿ ಆಗದಂತೆ ಮತ್ತು ಹಾಳಾಗದಂತೆ ನೋಡಿಕೊಳ್ಳಬೇಕು. ಗ್ರಾಮ ಪಂಚಾಯಿತಿಗೆ ಬಿಡುಗಡೆಯಾಗುವ ಅನುದಾನವನ್ನು ಸೂಕ್ತವಾಗಿ ಬಳಸಿಕೊಂಡು ಅಭಿವೃದ್ಧಿ ಕೆಲಸ ಮಾಡಬೇಕು ಮತ್ತು ಭ್ರಷ್ಟಾಚಾರಕ್ಕೆ ಅವಕಾಶ ಮಾಡಕೂಡದು. ಅಂಗನವಾಡಿಯಲ್ಲಿ ಮಕ್ಕಳಿಗೆ ವಿತರಿಸಲು ಸರ್ಕಾರ ಸರಬರಾಜು ಮಾಡುವ ಪೌಷ್ಟಿಕ ಆಹಾರವನ್ನು ಎಲ್ಲಾ ಮಕ್ಕಳಿಗೆ ಸಮರ್ಪಕವಾಗಿ ವಿತರಿಸಬೇಕು. ಉದ್ಯೋಗ ಖಾತರಿ ಯೋಜನೆಯಲ್ಲಿ ಬರುವ ಸರ್ಕಾರದ ಹಣ ಸರಿಯಾಗಿ ವಿನಿಯೋಗ ಆಗಬೇಕು. ಅಕ್ರಮ ಮದ್ಯ ಮಾರಾಟ ತಡೆಯಬೇಕು. ಆಸ್ಪತ್ರೆಯಲ್ಲಿ ಔಷಧಿ ಮತ್ತು ಸಿಬ್ಬಂದಿ ಕೊರತೆ ಆಗದಂತೆ ನೋಡಿಕೊಳ್ಳಬೇಕು ಹಾಗೂ ಹೊಸದಾಗಿ ನಿರ್ಮಾಣವಾಗಿರುವ ಆಸ್ಪತ್ರೆಗೆ ವೈದ್ಯರನ್ನು ನೇಮಿಸಬೇಕು ಎಂದು ಕೆಆರ್‌ಎಸ್ ಪಕ್ಷದವರು ಆಗ್ರಹಿಸಿದರು.ಬಳಿಕ ಸ್ಥಳಕ್ಕೆ ತಹಸೀಲ್ದಾರ್ ಸೇರಿದಂತೆ ಸ್ಥಳೀಯ ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು. ಈ ವೇಳೆ ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳಾದ ಜ್ಞಾನ ಸಿಂಧೂ ಸ್ವಾಮಿ, ಎಸ್.ಎಚ್. ಲಿಂಗೇಗೌಡ, ರಘು ಜಾಣಗೆರೆ, ಸೋಮಸುಂದರ್, ವೆಂಕಟೇಶ್, ಬಸಪ್ಪ ಕುಂಬಾರ್, ಧರ್ಮರಾಜು, ಈರಣ್ಣ ಬಾರಕೇರ್ ಹಾಗೂ ಹುರಳಿಕೊಪ್ಪಿ ಗ್ರಾಮಸ್ಥರು ಇದ್ದರು.

Share this article