ಗ್ರಾಮ ಪಂಚಾಯಿತಿಯ ವಿವಿಧ ಸಮಸ್ಯೆ ಬಗೆಹರಿಸಲು ಆಗ್ರಹ

KannadaprabhaNewsNetwork | Published : Dec 7, 2024 12:32 AM

ಸಾರಾಂಶ

ಕಂದಾಯ ಇಲಾಖೆಯ ಆದೇಶದಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಕುಮಟಾ: ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಲ್ಲಿನ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರಾಪಂ ಸದಸ್ಯರ ತಾಲೂಕು ಒಕ್ಕೂಟದಿಂದ ತಾಪಂ ಇಒ ರಾಜೇಂದ್ರ ಭಟ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಗಿದೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ೧೧ಬಿ ಕೊಡುವುದಕ್ಕೆ ವಿಳಂಬವಾಗುತ್ತಿದೆ. ಜೆಜೆಎಂ ಯೋಜನೆಯಡಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗಳು ಹಾಳಾಗುತ್ತಿದ್ದು, ಪುನಃ ಸರಿಪಡಿಸಲು ಯಾವುದೇ ಕ್ರಮವಹಿಸದ ಗುತ್ತಿಗೆದಾರಿಗೆ ಸೂಕ್ತ ನಿರ್ದೇಶನ ನೀಡಬೇಕು. ಜೆಜೆಎಂ ಯೋಜನೆಯಡಿ ತರಬೇತಿ (ಜಲಮಿತ್ರ) ಪಡೆಯುತ್ತಿರುವ ಇಬ್ಬರಿಗೆ ಪಂಚಾಯಿತಿ ಅನುದಾನದಿಂದ ₹೫೦,೦೦೦ ಚೆಕ್ ನೀಡಲು ತಿಳಿಸಿದ್ದು, ಇದನ್ನು ಜೆಜೆಎಂ ಯೋಜನೆಯಿಂದಲೇ ನೀಡುವಂತಾಗಬೇಕು.

ಈಗಾಗಲೇ ಪಂಚಾಯಿತಿ ಅನುದಾನದಲ್ಲಿ ₹೧ ಲಕ್ಷ ಒಳಗೆ ಮಾತ್ರ ಒಂದು ಕಾಮಗಾರಿಗೆ ಕ್ರಿಯಾಯೋಜನೆ ಸಿದ್ಧಪಡಿಸಲು ಸೂಚಿಸಲಾಗಿದ್ದು, ಈಗಾಗಲೇ ಕಳೆದ ವರ್ಷದ ಅನುದಾನದಲ್ಲಿ ₹೧ ಲಕ್ಷ ಮೇಲ್ಪಟ್ಟ ಅನುದಾನ ಇಟ್ಟು ಕ್ರಿಯಾಯೋಜನೆ, ಅಂದಾಜು ಪಟ್ಟಿ ಆಗಿದೆ. ಈ ಹಂತದಲ್ಲಿ ಕ್ರಿಯಾಯೋಜನೆಯ ಕಾಮಗಾರಿ ಬದಲಿಸಲು ಕಷ್ಟಸಾಧ್ಯ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕು.

ಕೃಷಿ ಜಮೀನು ಮಾಲೀಕರು ಬಿನ್‌ಶೇತ್ಕಿ ಮಾಡಲು ಮುಂದಾದಾಗ, ರಸ್ತೆಗಾಗಿ ಗ್ರಾಪಂಗೆ ಮಾಲ್ಕಿ ಜಾಗ ಬರೆದು ಕೊಟ್ಟರೆ ಅದನ್ನು ಹಸ್ತಾಂತರ ಮಾಡಿಕೊಳ್ಳದಂತೆ ಕಂದಾಯ ಇಲಾಖೆಯ ಆದೇಶವಾಗಿದೆ. ಇದರಿಂದಾಗಿ ಪಂಚಾಯಿತಿಯು ಅರ್ಜಿದಾರರಿಗೆ ರಸ್ತೆ ಇರುವ ಬಗ್ಗೆ ದೃಢೀಕರಣ ನೀಡಲು ಆಗುತ್ತಿಲ್ಲ. ಜಾಗ ಹಸ್ತಾಂತರವಾಗದೇ ಮಾಲ್ಕಿ ಜಾಗದಲ್ಲಿ ಪಂಚಾಯಿತಿಯಿಂದ ಅನುದಾನ ಹಾಕಿ ರಸ್ತೆ ಮಾಡಲು ಬರುವುದಿಲ್ಲ. ಆದ್ದರಿಂದ ಕಂದಾಯ ಇಲಾಖೆಯ ಆದೇಶದಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಮನವಿಯನ್ನು ಸಂಘಟನೆಯ ಗೌರವಾಧ್ಯಕ್ಷ ಸುರೇಶ ಟಿ. ನಾಯ್ಕ, ಅಧ್ಯಕ್ಷ ಗಣೇಶ ಅಂಬಿಗ, ಪದಾಧಿಕಾರಿಗಳಾದ ಶಾಂತಾರಾಮ ನಾಯ್ಕ, ರಮಾಕಾಂತ ಹರಿಕಾಂತ, ರಾಘವೇಂದ್ರ ಪಟಗಾರ, ವಿರೂಪಾಕ್ಷ ನಾಯ್ಕ, ಚಂದ್ರಶೇಖರ ನಾಯ್ಕ, ಚಂದ್ರಹಾಸ ನಾಯ್ಕ, ಆನಂದು ನಾಯಕ, ಶಿವಯ್ಯ ಹರಿಕಾಂತ, ವಿಷ್ಣು ನಾಯ್ಕ, ದಿವಾಕರ ನಾಯ್ಕ, ಶ್ರೀಧರ ಪೈ, ದೇವು ಗೌಡ ಇನ್ನಿತರರು ಸಲ್ಲಿಸಿದರು.

ಭತ್ತದ ಖರೀದಿಗೆ ನೋಂದಣಿ ಕೇಂದ್ರ ಪ್ರಾರಂಭ

ಕಾರವಾರ: ಪ್ರಸಕ್ತ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಗಾಗಿ ಸರ್ಕಾರವು ಪ್ರತಿ ಕ್ವಿಂಟಲ್ ಸಾಮಾನ್ಯ ಭತ್ತಕ್ಕೆ ₹2300 ಮತ್ತು ಗ್ರೇಡ್ ಎ ಭತ್ತಕ್ಕೆ ₹2320 ದರ ನಿಗದಿಪಡಿಸಲಾಗಿದೆ.ಅಂಕೋಲಾ, ಕುಮಟಾ, ಭಟ್ಕಳ, ಶಿರಸಿ, ಸಿದ್ದಾಪುರ, ಮುಂಡಗೋಡ, ಹಳಿಯಾಳ ಹಾಗೂ ಜೋಯಿಡಾ ತಾಲೂಕು ಕೇಂದ್ರಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಫೆ. 28ರ ವರೆಗೆ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.

ರೈತರು ಫ್ರುರ್ಟ್ಸ್(FRUITS) ನೋಂದಾಯಿತ ಸಂಖ್ಯೆಯೊಂದಿಗೆ ಈ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಬಹುದು. ಪ್ರತಿ ಎಕರೆಗೆ 25 ಕ್ವಿಂಟಲ್‌ನಂತೆ ಪ್ರತಿ ನೋಂದಾಯಿತ ರೈತರಿಂದ ಗರಿಷ್ಠ 50 ಕ್ವಿಂಟಲ್ ಭತ್ತವನ್ನು ಜ. 1ರಿಂದ ಮಾ. 31ರ ವರೆಗೆ ಖರೀದಿ ಮಾಡಲಾಗುವುದು. ಭತ್ತವನ್ನು ಸರಬರಾಜು ಮಾಡಿದ ರೈತರಿಗೆ ಖರೀದಿ ಏಜೆನ್ಸಿಗಳಿಂದ ಡಿಬಿಟಿ ಮೂಲಕ ಹಣವನ್ನು ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು.ಭತ್ತ ಖರೀದಿಗೆ ಸಂಬಂಧಿಸಿದಂತೆ, ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ಆರಂಭಿಸಿದ್ದು, ಕಚೇರಿಯ ವೇಳೆ ದೂ. 08382- 226243 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article