ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ ಆರಂಭಿಸಲು ಆಗ್ರಹ

KannadaprabhaNewsNetwork |  
Published : Jun 10, 2024, 02:00 AM ISTUpdated : Jun 10, 2024, 11:03 AM IST
೯ಕೆಪಿಎಲ್4:ಕೊಪ್ಪಳ ನಗರದ ಮೀಡಿಯಾ ಕ್ಲಬ್‌ನಲ್ಲಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. | Kannada Prabha

ಸಾರಾಂಶ

ರಾಯಚೂರು ಜಿಲ್ಲೆಗೆ ಏಮ್ಸ್ ಆಸ್ಪತ್ರೆ ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಿತ್ತು. ಘೋಷಣೆ ಮಾಡಿದಂತೆ ಆಸ್ಪತ್ರೆ ಆರಂಭಿಸಬೇಕು

  ಕೊಪ್ಪಳ :  ರಾಯಚೂರು ಜಿಲ್ಲೆಗೆ ಏಮ್ಸ್ ಆಸ್ಪತ್ರೆ ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಿತ್ತು. ಘೋಷಣೆ ಮಾಡಿದಂತೆ ಆಸ್ಪತ್ರೆ ಆರಂಭಿಸಬೇಕು ಎಂದು ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ. ಬಸವರಾಜ ಕಳಸ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಮ್ಸ್ ಎನ್ನುವುದು ದೊಡ್ಡ ಆರೋಗ್ಯ ಸಂಸ್ಥೆಯಾಗಿದೆ. ಹಿಂದೆ ಮಾಜಿ ಪ್ರಧಾನಿ ಪಂ. ಜವಾಹರ್ ಲಾಲ್ ನೆಹರೂ ಈ ಸಂಸ್ಥೆ ಆರಂಭ ಮಾಡಿದರು. ದೇಶದಲ್ಲಿ ೨೪ ಏಮ್ಸ್ ಆಸ್ಪತ್ರೆಗಳಿವೆ. ಎಲ್ಲ ರೋಗಿಗಳಿಗೂ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತದೆ. ರಾಯಚೂರಿನಲ್ಲಿ ಏಮ್ಸ್ ಆರಂಭಕ್ಕೆ ಹೋರಾಟ ಆರಂಭಿಸಿ ಎರಡು ವರ್ಷ ಗತಿಸಿವೆ. ಆದರೂ ಜವಾಬ್ದಾರಿಯತ ಸರ್ಕಾರಕ್ಕೆ ನಮ್ಮ ಬಗ್ಗೆ ಕಾಳಜಿಯಿಲ್ಲ. ಸಾಮಾನ್ಯ ಬಡವರ ಪ್ರಾಣ ರಕ್ಷಣೆ ಮಾಡುವುದು ಇದರ ಮೂಲ ಉದ್ದೇಶವಾಗಿದೆ. ಇಲ್ಲಿ ಏಮ್ಸ್ ಆರಂಭವಾದರೆ ವೈದ್ಯಕೀಯ ಶಿಕ್ಷಣ, ಚಿಕಿತ್ಸೆಯ ಜತೆಗೆ ಉದ್ಯೋಗವೂ ಸೃಜನೆಯಾಗಲಿದೆ ಎಂದರು.

ಹಿಂದೆ ಡಾ. ನಂಜುಂಡಪ್ಪ ಸಮಿತಿಯಲ್ಲಿ ರಾಯಚೂರು ಜಿಲ್ಲೆಗೆ ಐಐಟಿ ಕೊಡಬೇಕು ಎನ್ನುವ ಶಿಫಾರಸು ಆಗಿತ್ತು. ಅಂದಿನ ರಾಜ್ಯ ಸರ್ಕಾರವೂ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರದ ರಾಜಕಾರಣಿಗಳ ಕುತಂತ್ರದಿಂದ ನಮಗೆ ಬರಬೇಕಾದ ಐಐಟಿ ತಪ್ಪಿ, ಧಾರವಾಡಕ್ಕೆ ಸ್ಥಳಾಂತರವಾಯಿತು. ಅದರ ಬದಲಿಗೆ ಏಮ್ಸ್ ಕೊಡಬೇಕು ಎಂದು ಒತ್ತಾಯ ಮಾಡಿದ್ದೇವೆ. ಹಿಂದೆ ಕೇಂದ್ರ ಸರ್ಕಾರವೇ ಈ ನಿರ್ಧಾರ ಕೈಗೊಂಡಿದೆ. ಅದರೂ ಈ ವರೆಗೂ ಅದರ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮಗೆ 371(ಜೆ) ನಡಿ ಏಮ್ಸ್ ಕೊಡಲಿ, ನೀತಿ ಆಯೋಗವು ಹಿಂದುಳಿದ ಜಿಲ್ಲೆಗಳ ವರದಿ ಸರ್ಕಾರಕ್ಕೆ ಸಲ್ಲಿಸುತ್ತದೆ. ಹಿಂದುಳಿದ 112  ಜಿಲ್ಲೆಗಳು ಮಹತ್ವಾಕಾಂಕ್ಷೆಯ ಜಿಲ್ಲೆಗಳು ಎಂದು ಘೋಷಣೆ ಮಾಡಿದೆ. 112 ಜಿಲ್ಲೆಯಲ್ಲಿ ರಾಯಚೂರು ಜಿಲ್ಲೆಯೂ ಒಂದಾಗಿದೆ. ನೀತಿ ಆಯೋಗದ ಶಿಫಾರಸು ಪ್ರಕಾರ ನಮಗೆ ಏಮ್ಸ್ ಜಾರಿ ಮಾಡಲಿ ಎಂದರು.

ಉತ್ತರ ಕರ್ನಾಟಕದ ಹೆಸರಿನಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗೆ ದ್ರೋಹ ಮಾಡಲಾಗುತ್ತಿದೆ. ಅಭಿವೃದ್ಧಿಗಾಗಿ ಬರುವ ಯೋಜನೆಗಳು ಹುಬ್ಬಳ್ಳಿ-ಧಾರವಾಡ ಸೇರುವಂತಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೇ ಈ ಕುತಂತ್ರಕ್ಕೆ ಕಾರಣ ಎಂದು ನೇರ ಆರೋಪ ಮಾಡಿದರು.

ಪ್ರಧಾನಿಗೆ ಹತ್ತಿರ ಇರುವ ಪ್ರಹ್ಲಾದ್ ಜೋಶಿ ಅವರು ರಾಯಚೂರು ಜಿಲ್ಲೆಗೆ ಏಮ್ಸ್ ಬಗ್ಗೆ ವಿಷಯ ಮುಟ್ಟಿಸುವ ಕೆಲಸ ಮಾಡಿಲ್ಲ. ಉತ್ತರ ಕರ್ನಾಟಕದ ಹೆಸರಿನಲ್ಲಿ ಧಾರವಾಡವು ಎಲ್ಲವನ್ನೂ ದೋಚುತ್ತಿದೆ. ಕಲ್ಯಾಣ ಕರ್ನಾಟಕ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ನಮಗೆ ಏಮ್ಸ್ ಬರಲಿದೆ. ಆ ನಿಟ್ಟಿನಲ್ಲಿ ಹೋರಾಡಬೇಕು ಎಂದರು.

ಏಮ್ಸ್ ಬಗ್ಗೆ ಸಿಎಂ ಸಿದ್ದರಾಮಯ್ಯ ಸರ್ಕಾರವು ಎರಡು ಬಾರಿ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಿದೆ. ಆದರೆ ಆ ಮನವಿಗೆ ಸ್ಪಂದನೆ ಸಿಗಲಿಲ್ಲ. ಕಾಂಗ್ರೆಸ್ ಸರ್ಕಾರವೇ ತಮ್ಮ ಪ್ರಣಾಳಿಕೆಯಲ್ಲಿ ರಾಯಚೂರಿಗೆ ಏಮ್ಸ್ ಸ್ಥಾಪನೆ ಬಗ್ಗೆ ಹೇಳಿಕೊಂಡಿದೆ. ಅವರು ನಮಗೆ ಸಹಕಾರ ಕೊಟ್ಟಿದ್ದಾರೆ. ಆದರೆ ಕೇಂದ್ರವೇ ನಮಗೆ ಸಹಕಾರ ಕೊಡುತ್ತಿಲ್ಲ. ಮಾಡು ಇಲ್ಲವೇ ಮಡಿ ಎಂಬಂತೆ ಅಂತಿಮವಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ಹೋರಾಟ ಮಾಡಲು ತೀರ್ಮಾನ ಮಾಡಿದ್ದೇವೆ ಎಂದರು.

ಪ್ರಮುಖರಾದ ಅಶ್ವತ್ ಕುಮಾರ ಜೈನ್, ಜಗದೀಶ, ಮಲ್ಲಿಕಾರ್ಜುನ, ರಮೇಶ ತುಪ್ಪದ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?