ನರಗುಂದ: ನರಗುಂದ ಮಾರ್ಗವಾಗಿ ನೂತನ ರೈಲ್ವೆ ಮಾರ್ಗ ಪ್ರಾರಂಭಿಸಬೇಕೆಂದು ಆಗ್ರಹಿಸಿ ರೈಲ್ವೆ ಸಚಿವರಿಗೆ ರಾಜ್ಯದ ಕೇಂದ್ರ ಸಚಿವರು ಮತ್ತು ಸಂಸದರು ಮನವಿ ನೀಡಿದ್ದು ಸಂತೋಷ ತಂದಿದೆ ಎಂದು ತಾಲೂಕು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಚನ್ನು ನಂದಿ ತಿಳಿಸಿದ್ದಾರೆ.
ಈ ಯೋಜನೆ ಸಾಮಾಜಿಕ ಮತ್ತು ಆರ್ಥಿಕ ಪ್ರಾಮುಖ್ಯತೆ ಹೊಂದಿದೆ. ಮೇಲಾಗಿ ಈ ರೈಲ್ವೆ ಮಾರ್ಗವು ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣ ಸಂಪರ್ಕಿಸುವ ನಿರ್ಣಾಯಕ ಜಂಕ್ಷನ್ ಆಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಸುಧಾರಿತ ರೈಲು ಸಂಪರ್ಕವಾಗಲಿದೆ. ಈ ಎಲ್ಲ ಪ್ರದೇಶಗಳಲ್ಲಿ ವ್ಯಾಪಾರ, ಕೃಷಿ, ಕೈಗಾರಿಕೆ ಮತ್ತು ಚಲನಶೀಲತೆ ಗಣನೀಯ ಪ್ರಯೋಜನ ನೀಡುತ್ತದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಸುಕ್ಷೇತ್ರ ಯಲ್ಲಮ್ಮ (ರೇಣುಕಾ) ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಯಲ್ಲಮ್ಮ ದೇವಾಲಯದ ಮೂಲಕ ರೈಲು ಮಾರ್ಗಯಾತ್ರಾರ್ಥಿಗಳಿಗೆ ಸುರಕ್ಷಿತ ಅನುಕೂಲಕರ ಮತ್ತು ಕೈಗೆಟಕುವ ಸಾರಿಗೆಯಾಗುತ್ತದೆ ಎಂದರು.
ನೈರುತ್ಯ ರೇಲ್ವೆಯಡಿ ಕುಷ್ಟಗಿ- ಘಟಪ್ರಭಾ ರೈಲ್ವೆ ಮಾರ್ಗದ ವಿವರವಾದ ಸಮೀಕ್ಷೆಗೆ ತಕ್ಷಣದ ಅನುಮೋದನೆ ನೀಡಿ ಮುಂಬರುವ ರೈಲ್ವೆ ಕಾಮಗಾರಿ ಯೋಜನೆ ಬಜೆಟ್‌ನಲ್ಲಿ ಸೇರಿಸಿ ಶೀಘ್ರ ಕೇಂದ್ರ ರೈಲ್ವೆ ಸಚಿವರು ಮಂಜೂರು ಮಾಡಬೇಕು. ಉತ್ತರ ಕರ್ನಾಟಕದ ಜನರ ಬಹುದಿನ ಬೇಡಿಕೆ ಈಡೇರಿಲಿದೆ ಎಂದಿದ್ದಾರೆ.