ಹಾವೇರಿ: ಪ್ರಸಕ್ತ ವರ್ಷದಿಂದಲೇ ಸರ್ಕಾರಿ ಕಾನೂನು ವಿದ್ಯಾಲಯ ಪ್ರಾರಂಭಿಸುವಂತೆ ಒತ್ತಾಯಿಸಿ, ಕಟ್ಟಡ ನಿರ್ಮಾಣ ವಿಳಂಬ ಖಂಡಿಸಿ ಎಸ್‌ಎಫ್‌ಐ ಹಾವೇರಿ ಜಿಲ್ಲಾ ಸಮಿತಿಯಿಂದ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ಅವರಿಗೆ ಮನವಿ ಸಲ್ಲಿಸಲಾಯಿತು.
ಎಸ್‌ಎಫ್‌ಐ ಅನೇಕ ವರ್ಷಗಳಿಂದ ಹಾವೇರಿ ಜಿಲ್ಲೆಗೊಂದು ಕಾನೂನು ಕಾಲೇಜು ಮಂಜೂರು ಮಾಡುವಂತೆ ಹೋರಾಟ ಮಾಡಿದ ಪ್ರತಿಫಲವಾಗಿ ಹಿಂದಿನ ಸರ್ಕಾರದ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಕಾನೂನು ಪದವಿ ಪಡೆಯ ಬಯಸುವ ನೂರಾರು ವಿದ್ಯಾರ್ಥಿಗಳು ಹಾವೇರಿಯಲ್ಲಿ ಸರ್ಕಾರಿ ಕಾಲೇಜು ಪ್ರಾರಂಭವಾಗಬಹುದು ಎಂದು ಎದುರು ನೋಡುತ್ತಾ ಕುಳಿತಿದ್ದಾರೆ. ನೆಲೊಗಲ್ ಗುಡ್ಡದಲ್ಲಿ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನಹರಿಸಿ, ಪ್ರಸಕ್ತ ವರ್ಷದಲ್ಲೇ ನಗರದ ಮುನ್ಸಿಪಲ್ ಮೈದಾನದ ಹತ್ತಿರದ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಕಾಲೇಜಿನಲ್ಲಿ ಕಾನೂನು ತರಗತಿಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿದರು.
ಖಾಸಗಿ ಕಾಲೇಜ್‌ಗಳಿಗೆ ಅನುಮತಿ ನೀಡುವ ಸರ್ಕಾರ, ತನ್ನದೇ ಸರ್ಕಾರಿ ವಿದ್ಯಾಲಯ ಪ್ರಾರಂಭಿಸಲು ಹಿಂದೇಟು ಹಾಕುವಂತೆ ಕಾಣಲು ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ ಪ್ರಮುಖ ಕಾರಣವಾಗಿದೆ. ಶೀಘ್ರವಾಗಿ ಕಟ್ಟಡ ನಿರ್ಮಾಣ ಮಾಡಿ, ಇಲ್ಲವೇ ಪರ್ಯಾಯವಾಗಿ ಬೇರೆ ಯಾವುದಾದರೂ ಒಂದು ಸರ್ಕಾರಿ ಕಾಲೇಜಿನಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿ ಮಾಡಿಕೊಂಡು ಪ್ರಸಕ್ತ ವರ್ಷದಿಂದಲೇ ಪ್ರಾರಂಭಿಸಬೇಕು. ಯಾವುದೇ ರೀತಿಯ ಪ್ರತಿಕ್ರಿಯೆ ದೊರೆಯದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಸುನೀಲ್ ಕುಮಾರ್ ಎಲ್., ನಾಗರಾಜ ಕುರಬಗೊಂಡ, ನೆಹರು ಸೋಮಸಾಗರ ಇದ್ದರು.