ಗ್ರಾಪಂ ನೌಕರರ ಮೇಲಿನ ಹೆಚ್ಚುವರಿ ಕಾರ್ಯಭಾರ ತಡೆಗೆ ಆಗ್ರಹ

KannadaprabhaNewsNetwork |  
Published : Aug 06, 2026, 02:30 AM IST
ಸಿದ್ದಾಪುರದಲ್ಲಿ ಗ್ರಾಪಂ ನೌಕರರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಗ್ರಾಪಂ ನೌಕರರ ಮೇಲೆ ಅನ್ಯ ಇಲಾಖೆಗಳ ಕೆಲಸಗಳನ್ನು ಬಲವಂತವಾಗಿ ಹೇರುವುದನ್ನು ಖಂಡಿಸಿ ಹಾಗೂ ಕಂದಾಯ ಇಲಾಖೆಯ ಕೆಲಸವಾದ ಮನೆ ಮನೆಗೆ ಜಾತಿ, ಆದಾಯ ಮತ್ತು ನಿವಾಸಿ ಪ್ರಮಾಣ ಪತ್ರ ವಿತರಿಸುವ ಆದೇಶ ಹಿಂಪಡೆಯಬೇಕು.

ರಾಜ್ಯ ಗ್ರಾಪಂ ನೌಕರರ ಶ್ರೇಯೋಭಿವೃದ್ಧಿ ಸಂಘದ ತಾಲೂಕು ಸಮಿತಿಯಿಂದ ತಾಪಂ ಇಒಗೆ ಮನವಿ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಗ್ರಾಪಂ ನೌಕರರ ಮೇಲೆ ಅನ್ಯ ಇಲಾಖೆಗಳ ಕೆಲಸಗಳನ್ನು ಬಲವಂತವಾಗಿ ಹೇರುವುದನ್ನು ಖಂಡಿಸಿ ಹಾಗೂ ಕಂದಾಯ ಇಲಾಖೆಯ ಕೆಲಸವಾದ ಮನೆ ಮನೆಗೆ ಜಾತಿ, ಆದಾಯ ಮತ್ತು ನಿವಾಸಿ ಪ್ರಮಾಣ ಪತ್ರ ವಿತರಿಸುವ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಶ್ರೇಯೋಭಿವೃದ್ಧಿ ಸಂಘದ (ಆರ್.ಡಿ.ಪಿ.ಆರ್) ತಾಲೂಕು ಸಮಿತಿಯಿಂದ ತಾಪಂ ಇಒಗೆ ಮನವಿ ಸಲ್ಲಿಸಲಾಯಿತು.

ಗ್ರಾಪಂ ನೌಕರರು ಈಗಾಗಲೇ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸ್ವಚ್ಛ ಭಾರತ್ ಮಿಷನ್, ಜಲ ಜೀವನ್ ಮಿಷನ್, 15ನೇ ಹಣಕಾಸು ಯೋಜನೆ ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಗಳ ಅನುಷ್ಠಾನದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ಕುಡಿಯುವ ನೀರು ಸರಬರಾಜು, ಬೀದಿ ದೀಪ ನಿರ್ವಹಣೆ, ಕರ ವಸೂಲಿ, ಜನನ-ಮರಣ ನೋಂದಣಿ, ಸಕಾಲು ಸೇವೆಗಳು ಹಾಗೂ ಇ-ಸ್ವತ್ತು ಮುಂತಾದ ತಂತ್ರಾಂಶಗಳ ನಿರ್ವಹಣೆಯನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ.

ಹೀಗಿರುವಾಗ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಮಾಡಬೇಕಾದ ಮನೆ ಮನೆಗೆ ತೆರಳಿ ಜಾತಿ, ಆದಾಯ ಹಾಗೂ ನಿವಾಸಿ ಪ್ರಮಾಣ ಪತ್ರ ವಿತರಿಸುವ ಕೆಲಸವನ್ನು ಪಂಚಾಯತ್ ನೌಕರರಿಗೆ ಬಲವಂತವಾಗಿ ನಿಯೋಜಿಸುತ್ತಿರುವುದರಿಂದ ಪಂಚಾಯತಿಯ ಮೂಲ ಕರ್ತವ್ಯಗಳಿಗೆ ಹಾಗೂ ಸಾರ್ವಜನಿಕ ಸೇವೆಗಳಿಗೆ ತೀವ್ರ ಅಡಚಣೆಯಾಗುತ್ತಿದೆ ಎಂದು ಸಂಘದ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.

ಈ ಹೆಚ್ಚುವರಿ ಕಾರ್ಯಭಾರದ ಒತ್ತಡವನ್ನು ತಕ್ಷಣವೇ ತೆರವುಗೊಳಿಸಬೇಕು. ಇಲ್ಲದಿದ್ದರೆ ಇಲಾಖೆಯ ಎಲ್ಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ತಾಲೂಕಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಿಗೂ ಈ ಕುರಿತು ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ತಾಲೂಕು ಸಮಿತಿ ಅಧ್ಯಕ್ಷ ಗುರು ಎಂ. ನಾಯ್ಕ, ಉಪಾಧ್ಯಕ್ಷೆ ಗೀತಾ ಗೌಡ, ಜಿಲ್ಲಾಧ್ಯಕ್ಷ ಗಂಗಾಧರ ನಾಯ್ಕ ಹಾಗೂ ತಾಲೂಕು ಸಮಿತಿಯ ಸದಸ್ಯರು ಮತ್ತು ಗ್ರಾಪಂ ನೌಕರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ, ಬೆಳೆ ಪರಿಸ್ಥಿತಿ ಬಗ್ಗೆ ಸರ್ಕಾರಕ್ಕೆ ವರದಿ: ನರೇಂದ್ರಸ್ವಾಮಿ
ರ್‍ಯಾಗಿಂಗ್‌ ನಿಯಂತ್ರಣಕ್ಕೆ ಸರ್ಕಾರ ವಿಫಲ: ಡಾ.ಭರತ್‌ ಶೆಟ್ಟಿ ಟೀಕೆ