ಹನುಮಸಾಗರ: ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದಲ್ಲೊಂದು ಪ್ರತಿಭೆ ಹಾಗೂ ಕಲೆ ಅಡಗಿರುತ್ತದೆ. ಅದನ್ನು ಗುರುತಿಸಿ ಬೆಳೆಸಲು ಸೂಕ್ತ ಮಾರ್ಗದರ್ಶನ ಮತ್ತು ಅಗತ್ಯ ವಸ್ತುಗಳ ಪರಿಚಯ ಅತ್ಯಂತ ಮುಖ್ಯವಾಗಿದೆ ಎಂದು ದಾವಣಗೆರೆಯ ನಿವೃತ್ತ ಶಿಕ್ಷಕ ಕುಬೇರಪ್ಪ ಹೇಳಿದರು.
ಮನೆಯಲ್ಲಿರುವ ತ್ಯಾಜ್ಯ ವಸ್ತು ಸಮರ್ಪಕವಾಗಿ ಬಳಸಿದರೆ ಅವುಗಳಿಂದ ಆಕರ್ಷಕ ಹಾಗೂ ಉಪಯುಕ್ತ ಕಲಾಕೃತಿ ನಿರ್ಮಿಸಬಹುದು. ಹಳೆಯ ಪ್ಲಾಸ್ಟಿಕ್ ಬಾಟಲಿ ರಟ್ಟು, ಹಳೆಯ ಬಟ್ಟೆ ಹಾಗೂ ತ್ಯಾಜ್ಯ ಕಾಗದಗಳನ್ನು ಬಳಸಿ ಮನೆ ಅಲಂಕಾರಿಕ ವಸ್ತುಗಳು, ಹೂವಿನ ಕುಂಡಗಳು, ಪೆನ್ ಸ್ಟ್ಯಾಂಡ್ ಸೇರಿದಂತೆ ವಿವಿಧ ಕಲಾಕೃತಿ ಸುಲಭವಾಗಿ ತಯಾರಿಸಬಹುದಾಗಿದೆ ಎಂದು ತಿಳಿಸಿದರು.
ಜೀವನದಲ್ಲಿ ವೃತ್ತಿ,ನಿವೃತ್ತಿ ಹಾಗೂ ಪ್ರವೃತ್ತಿ ಎಂಬ ಮೂರು ಅಂಶಗಳು ಪ್ರಮುಖವಾಗಿದ್ದು, ಪ್ರವೃತ್ತಿಯೇ ವ್ಯಕ್ತಿಯಲ್ಲಿರುವ ಸೃಜನಶೀಲತೆ ಬೆಳೆಸುತ್ತದೆ. ವಿದ್ಯಾರ್ಥಿನಿಯರು ಓದಿನ ಜತೆಗೆ ಕಲೆ ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡರೆ ಆತ್ಮವಿಶ್ವಾಸ ಹೆಚ್ಚುತ್ತದೆ. ತಾವು ಕಲಿತ ಶಾಲೆಗೆ ಸೇವೆ ಸಲ್ಲಿಸುವುದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದರು.ತರಬೇತಿ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ವಿವಿಧ ತ್ಯಾಜ್ಯ ವಸ್ತುಗಳಿಂದ ಅಲಂಕಾರಿಕ ವಸ್ತು ತಯಾರಿಸುವ ಪ್ರಾಯೋಗಿಕ ಪ್ರದರ್ಶನ ನೀಡಲಾಯಿತು. ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡು ವಿವಿಧ ಕಲಾಕೃತಿ ಸಿದ್ಧಪಡಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಭಾರತಿ ದೇಸಾಯಿ, ನಿಲಯ ಮೇಲ್ವಿಚಾರಕಿ ರುಬಿಯಾಬೇಗಂ, ಶಿಕ್ಷಕಿಯರಾದ ಸಾವಿತ್ರಿ ನಿಟ್ಟಾಲಿ, ಜ್ಯೋತಿಲಕ್ಷ್ಮಿ ಬಾಳಿಹಳ್ಳಮಠ, ಶಕುಂತಲಾ ಚಿನಿವಾಲರ, ಬಸವರಾಜೇಶ್ವರಿ ಅಗಸಿಮುಂದಿನ, ಜಹೀರಾ ಬಾನು, ರೇಖಾ ಹೋಳಿ, ಲೆಕ್ಕಿಗೆ ಹನುಮಂತಿ ಹೂಲಸಗೇರಿ ಹಾಗೂ ಅಡುಗೆ ಸಿಬ್ಬಂದಿ ಇತರರು ಇದ್ದರು.