ಚನ್ನಪಟ್ಟಣ: ಸರ್ಕಾರ ಟೌನ್‌ಶಿಪ್ ನಿರ್ಮಾಣ ಹಾಗೂ ಕೈಗಾರೀಕರಣದ ನೆಪದಲ್ಲಿ ಬಿಡದಿ ಹಾಗೂ ಆನೆಕಲ್ಲಿನ ಸರ್ಜಾಪುರ ಪ್ರದೇಶಗಳಲ್ಲಿ ರೈತರ ಫಲವತ್ತಾದ ಭೂಮಿಯನ್ನು ಬಲವಂತವಾಗಿ ಭೂಸ್ವಾಧೀನಪಡಿಸಿಕೊಳ್ಳುತ್ತಿರುವ ಪ್ರಕ್ರಿಯೆಯನ್ನು ತಕ್ಷಣ ರದ್ದುಗೊಳಿಸುವ ಜತೆಗೆ ರೈತರ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಜಮಾಯಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ಟೌನ್ ಶಿಪ್ ನಿರ್ಮಾಣ ಹಾಗೂ ಕೆಐಡಿಬಿ ಮುಖಾಂತರ ಕೈಗಾರೀಕರಣ ನೆಪದಿಂದ ಬಿಡದಿ ಹಾಗೂ ಆನೆಕಲ್ಲಿನ ಸರ್ಜಾಪುರ ಪ್ರದೇಶಗಳಲ್ಲಿ ಸುಮಾರು ೧೦,೦೦೦ ಎಕರೆಗೂ ಹೆಚ್ಚು ರೈತರ ಫಲವತ್ತಾದ ಭೂಪ್ರದೇಶವನ್ನು ಬಲವಂತವಾಗಿ ಸ್ವಾಧೀನಗೊಳಿಸಿ ಅಸಂಖ್ಯೆ ಪ್ರಮಾಣದ ರೈತರ ಬದುಕನ್ನೆ ನಾಶ ಮಾಡುವ ಹುನ್ನಾರ ನಡೆಸಿದೆ. ಸರ್ಕಾರ ತಕ್ಷಣ ಭೂಸ್ವಾಧೀನ ಪ್ರಕ್ರಿಯೆನ್ನು ಕೈಬಿಟ್ಟು ರೈತರ ಜಮೀನನ್ನು ಉಳಿಸಬೇಕು ಎಂದು ಆಗ್ರಹಿಸಿದರು.
ಈ ಸರ್ಕಾರ ರೈತರ ಬದುಕನ್ನೇ ಹಾಳು ಮಾಡುವ ಕೆಲಸ ಮಾಡುತ್ತಿದೆ. ಭೂಮಿ ಕಿತ್ತುಕೊಳ್ಳುವ ಜತೆಗೆ ನಮ್ಮ ಬದುಕು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ತಾಲೂಕು ಕಚೇರಿಗಳು ಸಂತೆಗಳಾಗಿದೆ, ರೈತರ ದಾಖಲೆಗಳು ಇರುವುದೇ ಇಲ್ಲ. ಸರ್ಕಾರ ತನ್ನ ನಿಲುವು ಬದಲಿಸಿಕೊಂಡು ರೈತರಿಗೆ ನೆರವಾಗುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.ಹಲವು ಹಕ್ಕೋತ್ತಾಯ: ರೈತರಿಗೆ ಮಾರಕವಾದ ಕಾಯ್ದೆಗಳ ತಿದ್ದುಪಡಿಯನ್ನು ವಾಪಸ್ಸು ಪಡೆಯುವ ಭರವಸೆಯೊಡನೆ ಅಧಿಕಾರಕ್ಕೆ ಬಂದ ಸರ್ಕಾರ ಈ ಮಾರಕ ಕೃಷಿ ಕಾಯ್ದೆಗಳ ತಿದ್ದುಪಡಿ ರದ್ದುಗೊಳಿಸಿ, ಸರ್ಕಾರ ವಚನ ಭ್ರಷ್ಟವಲ್ಲ ಎಂಬುದನ್ನು ಸಾಬೀತು ಪಡಿಸಬೇಕು. ಫಲವತ್ತಾದ ಭೂಮಿಯನ್ನು ವ್ಯವಸ್ಥಾಯೇತರ ಉದ್ದೇಶಕ್ಕೆ ಬಳಸುವುದರಿಂದ ಆಹಾರ ಸಾರ್ವಭೌಮತ್ವಕ್ಕೆ ಪೆಟ್ಟು ಬಿದ್ದು ಆಹಾರ ಭದ್ರತೆಯ ಹಕ್ಕು ನಾಶವಾಗುವುದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ರೈತ ಭೂಮಿ ಕಳೆದುಕೊಂಡು ಉದ್ಯೋಗ ಮತ್ತು ಆಹಾರಕ್ಕಾಗಿ ಬೇಡುವ ಪರಿಸ್ಥಿತಿ ಸೃಷ್ಟಿಯಾಗುವುದನ್ನು ನಿಯಂತ್ರಿಸಬೇಕು. ಕರ್ನಾಟಕದ ಪ್ರಮುಖ ವಾಣಿಜ್ಯ ನಗರಗಳಾದ ಬೆಳಗಾವಿ, ಮೈಸೂರು, ಹುಬ್ಬಳಿ, ಶಿವಮೊಗ್ಗ, ಪ್ರದೇಶಗಳಿಗೆ ಸುಸಜ್ಜಿತ ರಸ್ತೆ, ರೈಲ್ವೆ, ವಿಮಾನ ನಿಲ್ದಾಣಗಳಿದ್ದು ಕೈಗಾರೀಕರಣವನ್ನು ಆ ಪ್ರದೇಶಕ್ಕೂ ವಿಸ್ತರಿಸುವ ಮೂಲಕ ಉದ್ಯೋಗ ಸೃಷ್ಟಿ ಜೊತೆಗೆ ಬೆಂಗಳೂರು ನಗರದ ವಾಯು ಮಾಲಿನ್ಯ, ಜನದಟ್ಟಣೆ, ವಾಹನದಟ್ಟಣಿಯನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.ಸರ್ಕಾರ ಜಾರಿಗೊಳಿಸುತ್ತಿರುವ ರೈತರ ನೀರಾವರಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಸ್ವತಃ ರೈತರೇ ಟಿ.ಸಿ, ಕಂಬಗಳು, ಇತರೆ ಬಿಡಿ ಭಾಗಗಳನ್ನು ಭರಿಸಬೇಕು ಎಂಬ ನಿಯಮ ರದ್ದಾಗಬೇಕು. ಜಿಲ್ಲೆಯ ಜೀವನಾಡಿ ಇಗ್ಗಲೂರು-ಸತ್ತೆಗಾಲ ನೀರು ಸರಬರಾಜು ಯೋಜನೆ ತ್ವರಿತವಾಗಿ ಮುಕ್ತಾಯಗೊಳ್ಳಬೇಕು. ಜಿಲ್ಲೆಯ ರಸಗೊಬ್ಬರ ದಾಸ್ಥಾನು ಮಳಿಗೆ ನಿರ್ಮಿಸಲು ಅವಕಾಶ ಮಾಡಬೇಕು. ರೈತರಿಗೆ ವಿವಿಧ ಆಮಿಷಗಳನ್ನು ನೀಡಿ ಕನ್ನಡೇತರ ಭಾಷೆಗಳಲ್ಲಿ ಅರ್ಜಿ ಹಾಗೂ ಷರತ್ತುಗಳಿಗೆ ಸಹಿ ಪಡೆದು, ಶೋಷಣೆ ಮಾಡುತ್ತಿರುವ ಕೇರಳ, ತಮಿಳುನಾಡು ಮೂಲದ ಮೈಕ್ರೋ ಫೈನಾನ್ಸ್ ಕಂಪನಿಗಳ ವಹಿವಾಟುಗಳ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ತಮ್ಮ ಹಕ್ಕೋತ್ತಾಯಗಳ ಕುರಿತು ಉಪತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ನೀಡಿದರು.ರೈತ ಸಂಘದ ತಾಲೂಕು ಅಧ್ಯಕ್ಷ ರಾಮೇಗೌಡ, ಕಾರ್ಯದರ್ಶಿ ಕೋದಂಡರಾಮು, ಮುಖಂಡರಾದ, ಕೆ.ಎನ್. ರಾಜು, ಬೋರೇಗೌಡ, ಕೆ.ಜಿ. ಗುರುಲಿಂಗಯ್ಯ, ಎಂ.ಸಿ. ವಿಶ್ವನಾಥ, ಸಿದ್ದರಾಜು, ಇಂದಿರಮ್ಮ, ರಾಜೇಶ್ವರಿ, ಸವಿತಾ ಇತರರು ಇದ್ದರು.
ಪೊಟೋ೧೫ಸಿಪಿಟಿ೧: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪತಹಸೀಲ್ದಾರ್‌ಗೆ ತಮ್ಮ ಹಕ್ಕೋತ್ತಾಯಗಳ ಮನವಿಪತ್ರ ಸಲ್ಲಿಸಿದರು.