ಕಾರ್ಯಾಗಾರ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಚ್.ಎಂ. ರೇವಣ್ಣ ಹೇಳಿಕೆ । ದೇಶದ ಇತರೆ ರಾಜ್ಯಗಳು ನಮ್ಮ ಗ್ಯಾರಂಟಿ ಮಾದರಿ ಅಳವಡಿಸಿಕೊಳ್ಳುತ್ತಿವೆ
ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ತಿಳಿಸಿದರು.
ನಗರದ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸೋಮವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಕಾರ್ಯಾಗಾರ ಹಾಗೂ ಪ್ರಗತಿ ಪರಿಶೀಲನಾ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಡೀ ದೇಶಕ್ಕೆ ಮಾದರಿ ಹಾಗೂ ಜನಪರವಾಗಿರುವ ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿ ಜನರು ಸ್ವಾವಲಂಬಿಯಾಗಿ ಬದುಕಲು ಸರ್ಕಾರವು ಅನುವು ಮಾಡಿಕೊಟ್ಟಿದೆ. ಆರಂಭದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಇದ್ದ ಅನುಮಾನವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರ ಮೆಟ್ಟಿನಿಂತಿದೆ. ದೇಶದ ಇತರೆ ರಾಜ್ಯಗಳು ನಮ್ಮ ಗ್ಯಾರಂಟಿ ಯೋಜನೆಗಳ ಮಾದರಿಯನ್ನು ಅಳವಡಿಸಿಕೊಳ್ಳುತ್ತಿವೆ. ಚಾಮರಾಜನಗರ ಜಿಲ್ಲೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿರುವುದು ಶ್ಲಾಘನೀಯವಾಗಿದೆ ಎಂದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರ್‌ನಾಥ್ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಶೋಷಿತರು, ಮಹಿಳೆಯರ ಸ್ವಾವಲಂಬನೆಯ ಕನಸು ಕಂಡಿದ್ದರು. ಅವರ ಆಶೋತ್ತರಗಳನ್ನು ನಮ್ಮ ಸರ್ಕಾರ ನನಸು ಮಾಡುತ್ತಿದೆ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಗೃಹಲಕ್ಷ್ಮೀ ಯೋಜನೆಯಡಿ ರಾಜ್ಯದಲ್ಲಿಯೇ ಚಾಮರಾಜನಗರ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ಎಂದರು.
ಗ್ಯಾರಂಟಿ ಯೋಜನೆಗಳ ಲೋಗೊ ಬಿಡುಗಡೆ ಮಾಡಲಾಯಿತು. ಕಲೆ ನಟರಾಜು ಸಾಹಿತ್ಯದಲ್ಲಿ ಗಾಯಕ ಸಿ.ಎಂ. ನರಸಿಂಹಮೂರ್ತಿ ಹಾಡಿರುವ ಪಂಚ ಗ್ಯಾರಂಟಿ ಯೋಜನೆಗಳ ಕುರಿತ ಕರ್ನಾಟಕ ಸರ್ಕಾರ ಹರುಷ ತಂದಿತು, ಗ್ಯಾರಂಟಿ ಯೋಜನೆಯ ನಮಗೆ ನೀಡಿತು ಎಂಬ ವಿಡಿಯೋ ದೃಶ್ಯಾವಳಿಯನ್ನು ಎಚ್.ಎಂ. ರೇವಣ್ಣ ಬಿಡುಗಡೆ ಮಾಡಿದರು.
-------------
ಚಾಮರಾಜನಗರದ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ನಡೆದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಕಾರ್ಯಗಾರವನ್ನು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಉದ್ಘಾಟಿಸಿದರು.