ಆನವಟ್ಟಿ: ಕಾನೂನು ಬಾಹಿರ ಹಾಗೂ ನಿಯಮಗಳನ್ನು ಗಾಳಿಗೆ ತೂರಿ ಎಣ್ಣೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಸ್ಥಗಿತ ಗೊಳಿಸಬೇಕೆಂದು ಆಗ್ರಹಿಸಿ ಎಣ್ಣೆಕೊಪ್ಪ, ತೆವರತೆಪ್ಪ, ಬೆಲವಂತನಕೊಪ್ಪ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಈ ಗ್ರಾಮಗಳ ಗರ್ಭಿಣಿಯರ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಅವಧಿಗೂ ಮುನ್ನಾ ಹೆರಿಗೆಗಳಾಗುತ್ತಿವೆ. ರಕ್ತಸ್ರಾವ, ಉಸಿರಾಟದ ತೊಂದರೆ ಆಗುತ್ತಿದೆ. ಬಾಣಂತಿಯರು, ವೃದ್ಧರು, ಹೃದಯ ಸಂಬಂಧಿ ಕಾಯಿಲೆ ಇರುವವರು ಜೀವಭಯದ ಜೊತೆಗೆ ಮಾನಸಿಕ ಒತ್ತಡ ಅನುಭವಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಣಿಗಾರಿಕೆ ನಡೆಯುತ್ತಿರುವ ಎಣ್ಣೆಕೊಪ್ಪ ಪಂಚಾಯಿತಿಯ ಸರ್ವೇ ನಂಬರ್ 60, 100, 128 ದನದ ಮುಪ್ಪತ್ತು ಆಗಿದ್ದು. ಇಲ್ಲಿ ಕಲ್ಲುಗಾರಿಣಿಕೆ ಅವಕಾಶ ಮಾಡಿಕೊಂಡಲಾಗಿದೆ. ಸರ್ಕಾರ ನಿಯಮದಂತೆ 100 ಜಾನುವಾರುಗಳಿಗೆ 30 ಎಕರೆ ಜಮೀನು ಮೀಸಲು ಮಾಡಲಾಗಿದೆ. ಆದರೆ ಈ ಪ್ರದೇಶದಲ್ಲಿ 498 ಜಾನುವಾರುಗಳಿವೆ ಅಂದರೆ 150 ಎಕರೆ ಬೇಕು. ಆದರೆ ಲಭ್ಯವಿರುವುದು 13 ಎಕರೆ ದನದ ಮುಪ್ಪತ್ತು ಮಾತ್ರ ಎಂದು ತಿಳಿಸಿದರು.ಮುಖಂಡ ಕಡ್ಲೇರ್ ರುದ್ರಪ್ಪ ಮಾತನಾಡಿ, 38 ವರ್ಷದಿಂದ ಮಾಜಿ ಮುಖ್ಯಂತ್ರಿ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಅವರಿರೊಂದಿಗೆ ಜನ ಕಲ್ಯಾಣ ಕೆಲಸಗಳಲ್ಲಿ ಭಾಗಿಯಾಗಿದ್ದೇನೆ. ಜನರ ಸಂಕಷ್ಟಕ್ಕೆ ಮಧ್ಯರಾತ್ರಿ ಆದರೂ ಹೋಗಿ ಸ್ಪಂದಿಸಿದ್ದೇನೆ. ಅಧಿಕಾರಕ್ಕಾಗಿ ಎಂದೂ ಆಸೆ ಪಟ್ಟಿಲ್ಲ. ಆದರೆ ಸಚಿವರು ಕೆಲವರ ಹೇಳಿಕೆ ಮಾತು ಕೇಳಿ ಬೆಂಗಳೂರಿನಲ್ಲಿ ಅವರನ್ನು ಕಂಡು ಕಲ್ಲು ಗಣಿಗಾರಿಕೆ ಬಗ್ಗೆ ಮಾಹಿತಿ ನೀಡಲು ಹೋದಾಗ, ಆಲಿಸುವ ಔದರ್ಯ ತೋರದೆ, ನನ್ನನ್ನು ಗೇಟ್‌ಪಾಸ್ ಮಾಡುವ ಮಾತನಾಡಿದ್ದಾರೆ. ಎಣ್ಣೆಕೊಪ್ಪ ಪಂಚಾಯಿತಿ ವ್ಯಾಪ್ತಿಯ ಜನರಿಗೆ ತೊಂದರೆಯಾಗುವುದಾದರೆ ನಾನೇ ಅವರಿಂದ ದೂರ ಸರಿಯುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು.
ವೈದ್ಯ, ಕೃಷಿಕ ಜ್ಞಾನೇಶ್ ಮಾತನಾಡಿ, ಕಲ್ಲು ಗಣಿಗಾರಿಕೆ ನಿಲ್ಲಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಉಗ್ರವಾದ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಮುಖಂಡರಾದ ಹೊನ್ನಪ್ಪ ಎಣ್ಣೆಕೊಪ್ಪ, ಮಂಜಪ್ಪ ಹಿತ್ತಲಮನೆ, ಜಗದೀಶಪ್ಪ ತೆವರೆತೆಪ್ಪ, ಸುರೇಶಪ್ಪ ಹುಳ್ಳೇರ್, ಟಿ.ಆಂಜನೇಯ, ಮಂಜು ಎಲೆಗಾರ್, ಶರಣಪ್ಪ, ಯುವರಾಜ ಗೌಡ, ಟಿಪಿಎಸ್ ಮಂಜು, ಡಿಎಸ್‌ಎಸ್ ಮಹೇಶ್, ಉಮೇಶ್ ಪಾಟೀಲ್, ಮಂಜಪ್ಪ, ಬಂಗಾರಪ್ಪ, ನಿಜಲಿಂಗಪ್ಪ, ಸಂತೋಷ, ಪರಮೇಶಪ್ಪ ಮತ್ತಿತರರಿದ್ದರು.