ಮಾಗಡಿ: ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ದಾಖಲೆ ಸಮೇತ ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.
ಎರಡು ವರ್ಷಗಳ ಬಳಿಕ ತಾಲೂಕು ಕಚೇರಿಗೆ ಆಗಮಿಸಿದ ಮಂಜುನಾಥ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಗ್ರೇಟ್-2 ತಹಸೀಲ್ದಾರ್ ಶರತ್ ಕುಮಾರ್ ಜೊತೆ ಚರ್ಚಿಸಿ ಕೂಡಲೇ ರೈತರ ಸಮಸ್ಯೆಯನ್ನು ಬಗೆಹರಿಸಬೇಕೆಂಬ ನಿಟ್ಟಿನಲ್ಲಿ ಆಗಮಿಸಿದ್ದೇನೆ. ಆದರೆ ತಹಸೀಲ್ದಾರರೇ ಇಲ್ಲ. ಮುಂದಿನ ವಾರ ಮತ್ತೆ ಬರುತ್ತೇನೆ. ಬೋಗಸ್ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಲಂಚ ತಾಂಡವ: ನಾನು ಶಾಸಕನಾಗಿದ್ದ ಅವಧಿಯಲ್ಲಿ ಪ್ರತಿ 15 ದಿನಕ್ಕೊಮ್ಮೆ ಅಧಿಕಾರಿಗಳ ಸಭೆ ಕರೆದು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ತಹಸೀಲ್ದಾರ್, ಕಂದಾಯ ಅಧಿಕಾರಿಗಳಿಗೆ ಸೂಚನೆ ಕೊಡುತ್ತಿದ್ದೆ. ಶಾಸಕ ಬಾಲಕೃಷ್ಣ ಎರಡು ವರ್ಷಗಳ ಅವಧಿಯಲ್ಲಿ ಕಿಟಕಿ, ಬಾಗಿಲು ಕೂಡ ಲಂಚ ಲಂಚ ಎಂದು ಕೇಳುವಂತೆ ಮಾಡಿದ್ದಾರೆ. ಅಧಿಕಾರಿಗಳು ಏಜೆಂಟ್‌ರ ಮುಖಾಂತರ ಹಣ ಪಡೆದು ದಾಖಲಾತಿಗಳನ್ನು ತಿದ್ದುತ್ತಿದ್ದು ಈ ಬಗ್ಗೆ ದಾಖಲೆ ಸಮೇತ ಶಾಸಕ ಬಾಲಕೃಷ್ಣಗೆ ನೀಡುತ್ತೇನೆ. ಕೂಡಲೇ ಶಾಸಕರು ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಎರಡು ವರ್ಷದ ಅವಧಿಯಲ್ಲಿ ಶಾಸಕ ಬಾಲಕೃಷ್ಣ ಎಷ್ಟು ಜನಕ್ಕೆ ಹಕ್ಕುಪತ್ರ ನೀಡಿದ್ದಾರೆ ಎಂಬುದನ್ನು ತೋರಿಸಬೇಕು ಬಗುರ್ ಹುಕುಂ ಕಮಿಟಿ ಸದಸ್ಯರು ನಾನು ಶಾಸಕರಾಗಿದ್ದ ಅವಧಿಯಲ್ಲಿ 950ಕ್ಕೂ ಹಕ್ಕು ಪತ್ರಗಳಿಗೆ ಸಹಿ ಮಾಡಿ ಅಂತಿಮ ಹಂತಕ್ಕೆ ಕೊಡಲಾಗಿತ್ತು. ಈಗ ಅದನ್ನೆಲ್ಲ ಪರಿಶೀಲಿಸುತ್ತೇನೆ. ಭ್ರಷ್ಟಾಚಾರದ ವಿರುದ್ಧ ಶಾಸಕ ಬಾಲಕೃಷ್ಣ ಕ್ರಮ ಕೈಗೊಳ್ಳದಿದ್ದರೆ ಈ ಬಗ್ಗೆ ಹೋರಾಡುತ್ತೇವೆ ಎಂದು ಮಾಜಿ ಶಾಸಕರು ಎಚ್ಚರಿಕೆ ನೀಡಿದರು.ಪ್ರತಿ ಶುಕ್ರವಾರ ಭೇಟಿ:
ಇನ್ನು ಮುಂದೆ ಪ್ರತಿ ಶುಕ್ರವಾರ ರಜಾ ದಿನ ಹೊರತುಪಡಿಸಿ ತಾಲೂಕು ಕಚೇರಿಗೆ ನಾನು ಭೇಟಿ ಕೊಡಲಿದ್ದು ರೈತರು ಯಾವುದೇ ಸಮಸ್ಯೆ ಇದ್ದರೂ ಅದನ್ನು ಅರ್ಜಿ ಮೂಲಕ ಕೊಟ್ಟರೆ ನಾನು ತಹಸೀಲ್ದಾರ್ ಮೂಲಕ ಆ ಅರ್ಜಿಗಳನ್ನು ಬಗೆಹರಿಸುತ್ತೇನೆ ಎಂದು ಮಂಜುನಾಥ್ ತಿಳಿಸಿದರು.(ಫೋಟೋ ಕ್ಯಾಫ್ಷನ್)
ಮಾಗಡಿ ತಾಲೂಕು ಕಚೇರಿಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಸಾರ್ವಜನಿಕರ ಸಮಸ್ಯೆ ಆಲಿಸಿದರು.