ನೌಕರರ ಕೆಲಸದ ಒತ್ತಡ ತಡೆಗೆ ಕ್ರಮ ಕೈಗೊಳ್ಳಲು ಆಗ್ರಹ

KannadaprabhaNewsNetwork | Published : Sep 27, 2024 1:24 AM

ಸಾರಾಂಶ

ಕನಿಷ್ಠ 21 ಮೊಬೈಲ್ ಆ್ಯಪ್‌ಗಳ ಮೂಲಕ ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅದನ್ನು ಸೆ. 23ರಿಂದ ಸ್ಥಗಿತಗೊಳಿಸುವುದರ ಬಗ್ಗೆ ಸರ್ಕಾರಕ್ಕೆ ರಾಜ್ಯ ಸಂಘದಿಂದ ಕೋರಿಕೊಂಡು ಅದರಂತೆ ಸ್ಥಗಿತಗೊಳಿಸಿದ್ದಾರೆ.

ಭಟ್ಕಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಲೇಖನಿ ಕೆಳಗಿಟ್ಟು, ಮೊಬೈಲ್ ಆ್ಯಪ್ ಮತ್ತು ವೆಬ್ ಕಾರ್ಯ ಸ್ಥಗಿತಗೊಳಿಸಿ ಕಪ್ಪುಪಟ್ಟಿ ಧರಿಸಿ ಇಲ್ಲಿನ ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ಹಳೇ ತಹಸೀಲ್ದಾರ್ ಕಚೇರಿಯ ಹಿಂಬದಿಯ ಮೈದಾನದಲ್ಲಿ ಗುರುವಾರ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.

ಸಂಘದ ಗೌರವಾಧ್ಯಕ್ಷ ಕೆ ಶಂಭು ಮಾತನಾಡಿ, ಸೆ. 22ರಂದು ಚಿತ್ರದುರ್ಗದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಭಾಭವನದಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಮುಷ್ಕರ ನಡೆಸಲಾಗುತ್ತಿದೆ. ರಾಜ್ಯದಲ್ಲಿ ನಮ್ಮ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದರು.

ಸಂಘದ ಸದಸ್ಯರಾದ ಚಾನ್ ಬಾಷಾ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳು ಕಂದಾಯ ಇಲಾಖೆಯಲ್ಲಿ ತಳಮಟ್ಟದ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಕಷ್ಟು ಸಮಸ್ಯೆಗಳಿದ್ದು, ಕೆಲವು ನೌಕರರು ಕೆಲಸದ ಒತ್ತಡದಿಂದ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಕಳೆದ 5- 6 ವರ್ಷಗಳಿಂದ ಭಟ್ಕಳ ತಾಲೂಕಿನಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಇದಕ್ಕೆ ಮೂಲ ಕಾರಣ ಕೆಲಸದ ಒತ್ತಡವಾಗಿದೆ. ನಮ್ಮದು ತಾಂತ್ರಿಕ ಹುದ್ದೆಯಲ್ಲದಿದ್ದರೂ ಒತ್ತಾಯಪೂರ್ವಕವಾಗಿ ತಾಂತ್ರಿಕ ಕೆಲಸವನ್ನು ಮೊಬೈಲ್ ಆ್ಯಪ್‌ ಮೂಲಕ ಮಾಡುವಂತ ಒತ್ತಡವನ್ನು ನಿರಂತರವಾಗಿ ಹೇರಲಾಗುತ್ತಿದೆ. ಕನಿಷ್ಠ 21 ಮೊಬೈಲ್ ಆ್ಯಪ್‌ಗಳ ಮೂಲಕ ನಮ್ಮ ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅದನ್ನು ಸೆ. 23ರಿಂದ ಸ್ಥಗಿತಗೊಳಿಸುವುದರ ಬಗ್ಗೆ ಸರ್ಕಾರಕ್ಕೆ ರಾಜ್ಯ ಸಂಘದಿಂದ ಕೋರಿಕೊಂಡು ಅದರಂತೆ ಸ್ಥಗಿತಗೊಳಿಸಿದ್ದಾರೆ.

ಸ್ಥಳಕ್ಕೆ ತಹಸೀಲ್ದಾರ್ ನಾಗರಾಜ ನಾಯ್ಕಡ ಭೇಟಿ ನೀಡಿ ಮುಷ್ಕರ ನಿರತರಿಂದ ಮನವಿ ಸ್ವೀಕರಿಸಿದರು. ಮುಷ್ಕರಕ್ಕೆ ಅನುಮತಿ ಇಲ್ಲದೇ ಇರುವುದರಿಂದ ಮುಷ್ಕರ ಕೈಬಿಡುವಂತೆ ತಹಸೀಲ್ದಾರರು ಸಂಘದ ಸದಸ್ಯರಿಗೆ ತಿಳಿಸಿದಾಗ ಅವರು ಮುಷ್ಕರ ಕೈಬಿಟ್ಟರು. ಇದಕ್ಕೂ ಪೂರ್ವದಲ್ಲಿ ಮಾಹಿತಿ ಹಕ್ಕು ವೇದಿಕೆಯ ಸ್ಥಳೀಯ ಘಟಕದ ಸದಸ್ಯರು ಪ್ರತಿಭಟನೆ ಸ್ಥಳಕ್ಕೆ ಬಂದು ನಮಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಿದೇ ಪೊಲೀಸ್ ವಶಕ್ಕೆ ನೀಡಿದ್ದರು. ಇವರಿಗೆ ಹೇಗೆ ಮುಷ್ಕರ ನಡೆಸಲು ಬಿಟ್ಟರು ಎಂದು ಪೊಲೀಸರಿಗೆ ಪ್ರಶ್ನಿಸಿದ್ದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷೆ ಲತಾ ನಾಯ್ಕ, ಉಪಾಧ್ಯಕ್ಷೆ ಹೇಮಾ ನಾಯ್ಕ, ಕಾರ್ಯದರ್ಶಿ ಚರಣ ಗೌಡ,ಸಂಘಟನೆ ಕಾರ್ಯದರ್ಶಿ ಗಣೇಶ ಕುಲಾಲ್ ಸದಸ್ಯರಾದ ವಿನುತ, ಶ್ರುತಿ ದೇವಾಡಿಗ, ಶಬಾನ ಬಾನು, ದೀಕ್ಷಿತ, ದಿಪ್ತಿ, ದಿವ್ಯಾ, ವೀಣಾ, ಐಶ್ವರ್ಯ ಇದ್ದರು.

ಸುಸಜ್ಜಿತ ಕಚೇರಿ ಸ್ಥಾಪನೆಗೆ ಒತ್ತಾಯ

ಕುಮಟಾ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ತಾಲೂಕು ಸೌಧದ ಆವಾರದಲ್ಲಿ ಗುರುವಾರ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದ್ದು, ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಸತೀಶ ಗೌಡ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಒಟ್ಟೂ ೨೧ಕ್ಕೂ ಹೆಚ್ಚು ವೆಬ್ ಹಾಗೂ ಮೊಬೈಲ್ ತಂತ್ರಾಂಶದ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಸಿ- ವರ್ಗದ ನೌಕರರ ಹತ್ತು ಪಟ್ಟು ಕೆಲಸ ಜವಾಬ್ದಾರಿ ವಹಿಸುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಯ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿಯನ್ನು ನಿಗದಿಪಡಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ ಸಹಿತ ಇತರ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಲಾಯಿತು.

ಬಳಿಕ ಧರಣಿ ಸ್ಥಳದಲ್ಲಿ ಜಮಾಯಿಸಿದ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಕಪ್ಪುಪಟ್ಟಿ ಧರಿಸಿ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸಿದ್ದಾರೆ.

Share this article