ಹೊಸಕೋಟೆ: ಗ್ರಾಮಾಡಳಿತ ಅಧಿಕಾರಿಗಳ ಹುದ್ದೆಗೆ, ತಾಂತ್ರಿಕ ಹುದ್ದೆಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡಬೇಕು ಎಂದು ಗ್ರಾಮಾಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ನ್ಯಾನಮೂರ್ತಿ ತಿಳಿಸಿದರು.ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ತಾಲೂಕು ಗ್ರಾಮಾಡಳಿತ ಅಧಿಕಾರಿಗಳ ಕೇಂದ್ರ ಸಂಘಗಳ ವತಿಯಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಮಾತನಾಡಿದರು.
ಮೊಬೈಲ್ ತಂತ್ರಾಂಶದ ಕೆಲಸ ವಿಚಾರವಾಗಿ ಇದುವರೆಗೂ ಆಗಿರುವ ನೌಕರರ ಅಮಾನತು ರದ್ದುಪಡಿಸಬೇಕು. ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರು ಹಾಗೂ ರಾಜಸ್ವ ನಿರೀಕ್ಷಕ ಹುದ್ದೆಗಳಿಗೆ ತಕ್ಷಣವೇ ಪದೋನ್ನತಿಗೆ ಕ್ರಮ ವಹಿಸಬೇಕು. ಅಂತರ ಜಿಲ್ಲಾ ಪತಿ ಪತ್ನಿ ಪ್ರಕರಣಗಳ ವರ್ಗಾವಣೆಗಳಿಗೆ ಚಾಲನೆ ನೀಡಿ ಅಂತಿಮ ಆದೇಶಕ್ಕೆ ಬಾಕಿ ಇರುವ ಪ್ರಕರಣಗಳ ವರ್ಗಾವಣೆ ಆದೇಶ ನೀಡುವಂತಾಗಬೇಕು. ವಿಶೇಷಚೇತನ ತೀವ್ರ ಅನಿವಾರ್ಯ ಹಾಗೂ ಆರೋಗ್ಯದ ಸಮಸ್ಯೆ ಇರುವ ಪ್ರಕರಣಗಳ ನಿಯೋಜನೆಗಳನ್ನು ಕೌನ್ಸೆಲಿಂಗ್ ಮೂಲಕ ನಿಯೋಜನೆ ಮಾಡಬೇಕು ಎಂದು ತಿಳಿಸಿದರು.
ಕಂದಾಯ ಇಲಾಖೆ ರಾಜ್ಯ ಸಂಘದ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಸರ್ಕಾರದ ನೀತಿಗಳಿಂದ ನಿರಂತರವಾಗಿ ಕೆಲಸದಲ್ಲೇ ಹೆಚ್ಚು ತೊಡಗಿಕೊಳ್ಳುವ ಅನಿವಾರ್ಯವಾಗಿದೆ. ನಮ್ಮ ವೈಯಕ್ತಿಕ ಜೀವನವನ್ನು ಬದಿಗೊತ್ತಿ ಕೆಲಸ ಮಾಡುತಿದ್ದೇವೆ. ಆದರೂ ನಮಗೆ ಅಗತ್ಯ ಸೌಲಭ್ಯಗಳು ಸರ್ಕಾರದಿಂದ ಧಕ್ಕುತ್ತಿಲ್ಲ ಎಂದರು.ಮುರಳಿ ರಾಮಲಿಂಗ, ಶಿವಕುಮಾರ್, ಸುರೇಶ್, ಉಪತಹಸೀಲ್ದಾರ್ ಕಚೇರಿ ರಾಜಸ್ವ ನಿರೀಕ್ಷಕರು, ತಾಲೂಕು ಕಚೇರಿ ಸಿಬ್ಬಂದಿ ಬಾಹ್ಯ ಬೆಂಬಲ ಸೂಚಿಸಿ ಪ್ರತಿಭಟನೆ ನೆಡೆಸಿದರು.