ಹೊಸಪೇಟೆ: ತಾಪಂ, ಜಿಪಂ ಮೀಸಲಾತಿ ಕರಡು ಪಟ್ಟಿ ಅಧಿಸೂಚನೆ ಹಿಂಪಡೆಯುವಂತೆ ಒತ್ತಾಯಿಸಿ ವಿಜಯನಗರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಮತ್ತು ರಾಷ್ಟ್ರೀಯ ಹಿಂದುಳಿದ ಜಾತಿಗಳ ಚೈತನ್ಯ ಸಮಿತಿಯ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜನವರಿ ತಿಂಗಳಲ್ಲಿ ಚುನಾವಣೆ ನಡೆಸುವುದಾಗಿ ಪಂಚಾಯತ್ ರಾಜ್ ಇಲಾಖೆ ಸಚಿವರು ಪ್ರಕಟಿಸಿದ್ದು, ವಾಸ್ತವವಾಗಿ ಈ ಮೀಸಲಾತಿ ಅಧಿಸೂಚನೆಯು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ.ವಿಶೇಷವಾಗಿ ಪ್ರವರ್ಗ-1, ಮತ್ತು ಪ್ರವರ್ಗ-2ಎ, ಗುಂಪಿನಲ್ಲಿರುವ ಅಸಂಘಟಿತ ಹಿಂದುಳಿದ ಮತ್ತು ದಮನಿತ ಸಮುದಾಯಗಳಿಗೆ ಈ ಮೀಸಲಾತಿಯಿಂದ ಘೋರ ಅನ್ಯಾಯವಾಗಿದೆ ಎಂದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯು.ಆಂಜನೇಯಲು ಮಾತನಾಡಿ, ರಾಜಕೀಯವಾಗಿ ಹಿಂದುಳಿದ ಜಾತಿ ಗುರುತಿಸಿ ಈ ಜಾತಿಗಳಿಗೆ ಪ್ರತ್ಯೇಕವಾಗಿ ಮೀಸಲಾತಿ ನಿಗಧಿಪಡಿಸಿದ ನಂತರವೇ ತಾಪಂ, ಜಿಪಂ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.ಸಂಘಟನೆಯ ಮುಖಂಡ ಎ.ಪಂಪಣ್ಣ, ಬಿ.ವಿರುಪಾಕ್ಷಪ್ಪ, ಕೆ.ವಿ.ರಮೇಶ್, ಗಜಾನಂದ ನಾಯ್ಕ್, ಬೋಜ ರಾಜೇಂದ್ರ, ರವಿಕುಮಾರ್, ಎಸ್.ಮನೋಹರ್, ಎಂ. ನಾಗಲಿಂಗಪ್ಪ, ಕಾಶಿವಿಶ್ವನಾಥ, ಐಲಿಸಿದ್ದಣ್ಣ, ವಾಸುದೇವ, ಭೀಮಪ್ಪ, ಯು.ಅಶ್ವಥಪ್ಪ, ವೈ.ಮಧುಸೂಧನ್, ವೀರಣ್ಣ, ಪರಸಪ್ಪ, ನರಸಿಂಹಲು, ದುರ್ಗಪ್ರಸಾದ್, ಕೋದಂಡಪಾಣಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.