ಕನ್ನಡಪ್ರಭ ವಾರ್ತೆ ಹೊಸಪೇಟೆ
ಶಂಕರ ಆನಂದ ಸಿಂಗ್ ಸರ್ಕಾರಿ ಕಾಲೇಜಿನಿಂದ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ವೈದ್ಯಕೀಯ ಕಾಲೇಜುಗಳಲ್ಲಿ ಶೇ.15 ರಷ್ಟು ಜಾರಿ ಮಾಡಿರುವ ಎನ್‌ಆರ್‌ಐ ಕೋಟಾ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿ ಸೀಟಿಗೆ ₹25 ಲಕ್ಷ ದುಬಾರಿ ಶುಲ್ಕದೊಂದಿಗೆ ಶೇ.15 ಎನ್‌ಆರ್‌ಐ ಕೋಟಾವನ್ನು ಆರಂಭಿಸಲು ನಿರ್ಧರಿಸಿದೆ. ರಾಜ್ಯ ಸರ್ಕಾರದ ಈ ನಡೆಯನ್ನು ಎಐಡಿಎಸ್‌ಓ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ. ಈ ಕ್ರಮದಿಂದ ವೈದ್ಯಕೀಯ ಕಾಲೇಜುಗಳಿಗೆ ಹಣ ಹರಿದು ಬರಲಿದೆ ಎಂದು ಸರ್ಕಾರ ಹೇಳಿಕೊಂಡಿದ್ದರೂ, ವಾಸ್ತವದಲ್ಲಿ ಈ ವಿಧಾನವು ಬಡ, ಮಧ್ಯಮವರ್ಗದ ವಿದ್ಯಾರ್ಥಿಗಳ ಪಾಲಿಗೆ ಮಾರಕವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಯಾವುದೇ ಆರ್ಥಿಕ ಹಿನ್ನೆಲೆ ಲೆಕ್ಕಿಸದೆ ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸುವ ಉದ್ದೇಶದೊಂದಿಗೆ ಸ್ಥಾಪಿಸಲಾಗಿದೆ. ಎನ್‌ಆರ್‌ಐ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಮೀಸಲಿಡುವ ಮೂಲಕ ಸರ್ಕಾರವು ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ಬಯಸುವ ನೂರಾರು ಶ್ರಮಜೀವಿ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶದ ಬಾಗಿಲು ಮುಚ್ಚುತ್ತಿದೆ. ಈಗಾಗಲೇ, ಕರ್ನಾಟಕದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕ ದೇಶದಲ್ಲಿಯೇ ಅತಿ ಹೆಚ್ಚಿದ್ದು, ಪಶ್ಚಿಮ ಬಂಗಾಳ ಮತ್ತು ಉತ್ತರ ಭಾರತದ ಹಲವು ರಾಜ್ಯಗಳ ಶುಲ್ಕಕ್ಕಿಂತ ಸುಮಾರು ಹತ್ತು ಪಟ್ಟು ಹೆಚ್ಚಾಗಿದೆ. ಈ ಅನ್ಯಾಯದ ಹೊರೆಯನ್ನು ಕಡಿಮೆ ಮಾಡುವ ಬದಲು, ಸರ್ಕಾರವು ವಿದ್ಯಾರ್ಥಿಗಳಿಂದ ಇನ್ನಷ್ಟು ಹಣವನ್ನು ವಸೂಲಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ರವಿಕಿರಣ್ ಜೆ.ಪಿ., ಯು. ಉಮಾದೇವಿ, ಆದಿತ್ಯ, ಗೌತಮ್ ಹಾಗೂ ಸುಮಾ ಮತ್ತಿತರರಿದ್ದರು.