ಅಚ್ಚುಕಟ್ಟಿನ 2.65 ಲಕ್ಷ ಎಕರೆಗೆ ಸಂಕಷ್ಟ ತಂದೊಡ್ಡಬೇಡಿ । ಭಾರತೀಯ ರೈತ ಒಕ್ಕೂಟ ತೀವ್ರ ಎಚ್ಚರಿಕೆಕನ್ನಡಪ್ರಭ ವಾರ್ತೆ, ದಾವಣಗೆರೆಲಕ್ಕವಳ್ಳಿಯ ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆಗೆ 3 ಟಿಎಂಸಿ ನೀರು, ವಾಣಿವಿಲಾಸ ಸಾಗರ, ಕಡೂರು, ತರೀಕೆರೆ ಕೆರೆಗಳನ್ನು ತುಂಬಿಸಿ, ಬೆಳೆ ಬೆಳೆಯಲು 5.97 ಟಿಎಂಸಿ ನೀರನ್ನು ಬಿಟ್ಟರೆ ಭದ್ರಾ ಅಚ್ಚುಕಟ್ಟು ರೈತರಿಗೆ ಘೋರ ಅನ್ಯಾಯವಾಗುವ ಹಿನ್ನೆಲೆಯಲ್ಲಿ ನೀರು ಬಿಡುವ ಆದೇಶ ತಕ್ಷಣ ಹಿಂಪಡೆಯಲೆಂದು ಭಾರತೀಯ ರೈತ ಒಕ್ಕೂಟವು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ. ನಗರದಲ್ಲಿ ಗುರುವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಒಕ್ಕೂಟದ ಅಧ್ಯಕ್ಷ ಶಾಮನೂರು ಎಚ್.ಆರ್. ಲಿಂಗರಾಜ, ಮುಖಂಡರಾದ ಆವರಗೊಳ್ಳ ಬಿ.ಎಂ. ಷಣ್ಮುಖಯ್ಯ, ಬೆಳವನೂರು ಬಿ. ನಾಗೇಶ್ವರರಾವ್ ಸೇರಿದಂತೆ ರೈತ ಮುಖಂಡರ ನೇತೃತ್ವದಲ್ಲಿ ಒಕ್ಕೂಟದ ನಿಯೋಗ ತೆರಳು, ಭದ್ರಾ ಮೇಲ್ದಂಡೆಗೆ 3 ಟಿಎಂಸಿ ನೀರು ಬಿಡುವ ಆದೇಶ ಹಿಂಪಡೆಯುವಂತೆ ಮನವಿ ಅರ್ಪಿಸಿತು.ಇದೇ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಶಾಮನೂರು ಎಚ್.ಆರ್. ಲಿಂಗರಾಜ, ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ನದಿಯಿಂದ ಭದ್ರಾ ಡ್ಯಾಂಗೆ ನೀರು ಲಿಫ್ಟ್ ಮಾಡಿ, ತುಂಬಿಸಿದ ನಂತರವೇ ಹರಿಸಬೇಕು. ಆದರೆ, ರಾಜ್ಯ ಸರ್ಕಾರ ಯಾವುದೋ ಒತ್ತಡಕ್ಕೆ, ಹಿರಿಯೂರು ಉಪ ಚುನಾವಣೆ ಕಾರಣಕ್ಕೆ ಭದ್ರಾ ಡ್ಯಾಂನಿಂದ 3 ಟಿಎಂಸಿ ನೀರು ಹರಿಸಲು ಆದೇಶ ಹೊರಡಿಸಿದ್ದು ಸರಿಯಲ್ಲ. ತಕ್ಷಣವೇ ನೀರು ಬಿಡುವ ಆದೇಶ ಹಿಂಪಡೆಯಲಿ ಎಂದು ಒತ್ತಾಯಿಸಿದರು. ವಾಣಿವಿಲಾಸ ಸಾಗರ, ಕಡೂರು, ತರೀಕೆರೆ ತಾಲೂಕುಗಳ ಕೆರೆಗಳನ್ನು ತುಂಬಿಸಿ, ಬೆಳೆ ಬೆಳೆಯಲು 5.97 ಟಿಎಂಸಿ ನೀರನ್ನು ಬಿಟ್ಟರೆ, ಭದ್ರಾ ಡ್ಯಾಂನ ಅಚ್ಚುಕಟ್ಟು ರೈತರಿಗೆ ಘೋರ ಅನ್ಯಾಯವಾಗುತ್ತದೆ. ಮೊದಲೇ ಮಳೆ ಕೈಕೊಟ್ಟು, ಬರ ಆವರಿಸಿದೆ. ಈ ಪರಿಸ್ಥಿತಿಯಲ್ಲಿ ಭದ್ರಾ ಡ್ಯಾಂನಲ್ಲಿರುವ 176 ಅಡಿ ನೀರಿನಲ್ಲೇ 3 ಟಿಎಂಸಿ ನೀರು ಬಿಡುವಂತೆ ಸರ್ಕಾರ ಆದೇಶ ಹೊರಡಿಸಿದ್ದು ಮಧ್ಯ ಕರ್ನಾಟಕದ ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಚಿಕ್ಕಮಗಳೂರು ಜಿಲ್ಲೆ ಮುತ್ತಿನಕೊಪ್ಪದ ಬಳಿ ತುಂಗಾ ನದಿ ನೀರಿನಲ್ಲಿ 17.41 ಟಿಎಂಸಿ ನೀರನ್ನು ಎತ್ತಿ, ಭದ್ರಾ ಡ್ಯಾಂಗೆ ತುಂಬಿಸಿದ ನಂತರವೇ ಭದ್ರಾ ಮೇಲ್ದಂಡೆ ಯೋಜನೆಗೆ ಬಿಡುಗಡೆ ಮಾಡಬೇಕೆಂಬ ನಿರ್ಣಯವನ್ನು ಸರ್ಕಾರ ಮಾಡಬೇಕು. ಇಲ್ಲದಿದ್ದರೆ ಭದ್ರಾ ಡ್ಯಾಂನ ಅಚ್ಚುಕಟ್ಟು ಪ್ರದೇಶದ 2.65 ಲಕ್ಷ ಎಕರೆ ರೈತರ ಜಮೀನುಗಳಿಗೆ ತೀವ್ರ ತೊಂದರೆಯಾಗುತ್ತದೆ. ಡ್ಯಾಂ ತುಂಬಿ ಹರಿಯುವಾಗ ವ್ಯರ್ಥ ನೀರನ್ನು ಮೇಲ್ದಂಡೆಗೆ ಹರಿಸಲಿ. ಇಲ್ಲದಿದ್ದರೆ ಅಚ್ಚುಕಟ್ಟು ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ ಎಂದು ಅವರು ಹೇಳಿದರು. ಅಚ್ಚುಕಟ್ಟು ರೈತರಿಗೆ ತೊಂದರೆಯನ್ನುಂಟು ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆ ಯೋಜನೆಗೆ 3 ಟಿಎಂಸಿ ನೀರು ಹರಿಸುವ ಆದೇಶವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ತಕ್ಷಣವೇ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದೆ ಆಗುವಂತಹ ಯಾವುದೇ ತೊಂದರೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಶಾಮನೂರು ಎಚ್.ಆರ್.ಲಿಂಗರಾಜ ಎಚ್ಚರಿಸಿದರು. ಮಾಜಿ ಮೇಯರ್ ಎಚ್.ಎನ್. ಗುರುನಾಥ, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡ ಎಚ್.ಜಿ.ಗಣೇಶಪ್ಪ, ಮುಖಂಡರಾದ ಎ.ಎಂ. ಮಂಜುನಾಥ, ಕುಂದುವಾಡ ಹನುಮಂತಪ್ಪ, ಎ.ಅಣ್ಣಪ್ಪ, ಎ.ಆರ್. ಸಿದ್ದೇಶ, ಶ್ರೀನಿವಾಸ ಬಾತಿ, ಎಂ.ಹನುಮಂತಪ್ಪ, ಎ.ಎಂ. ಮಂಜುನಾಥ, ಮಹೇಂದ್ರಪ್ಪ, ಸಿ.ಎಚ್. ಮಂಜುನಾಥ, ಮಹೇಶ, ಪುನೀತ, ಚಂದ್ರಶೇಖರ ಪೂಜಾರಿ, ಕಲ್ಪನಹಳ್ಳಿ ಉಜ್ಜಣ್ಣ ಸೇರಿದಂತೆ ಅನೇಕರ ರೈತರು ಇದ್ದರು. ಇದಕ್ಕೂ ಮುನ್ನ ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆ ಯೋಜನೆಗೆ 3 ಟಿಎಂಸಿ ನೀರು ಬಿಡುಗಡೆ ಮಾಡುವ ಸರ್ಕಾರದ ಆದೇಶವನ್ನು ವಿರೋಧಿಸಿ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ರೈತ ಒಕ್ಕೂಟದ ದುರೀಣ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೇತೃತ್ವದಲ್ಲಿ ಅಚ್ಚುಕಟ್ಟು ರೈತರ ಸಭೆ ನಡೆಸಲಾಯಿತು......................ಕ್ಯಾಪ್ಷನ್27ಕೆಡಿವಿಜಿ1