ಗಂಗಾವತಿ: ಸಹಕಾರ ಸಂಘಗಳ ಕಾಯ್ದೆ 1959ರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ತಿನ ಸಹಕಾರ ಸಂಘಗಳ ಕುರಿತು ಮತ್ತು ಸೌಹಾರ್ದ ಪತ್ತಿನ ಸಂಘಗಳ ಕುರಿತು ಸರ್ಕಾರ ಹೊರಡಿಸಿರುವ ಆದೇಶವನ್ನು ಕೂಡಲೆ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ 1987ರಲ್ಲಿ ಶ್ರೀ ಅರ್ಧನಾರೀಶ್ವರನ್ ಅವರ ಅಧ್ಯಕ್ಷತೆಯಲ್ಲಿ ಈ ಕುರಿತು ಅಧ್ಯಯನ ನಡೆಸಲು ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ತನ್ನ ವರದಿಯಲ್ಲಿ ಸರ್ಕಾರದ ಅತಿಯಾದ ಹಸ್ತಕ್ಷೇಪದಿಂದಾಗಿ ದೇಶದಲ್ಲಿ ಸಹಕಾರಿ ಚಳವಳಿ ವಿಫಲವಾಗಿದೆ ಎಂದು ಹೇಳಿತು. ಸಹಕಾರ ಚಳವಳಿ ವಿಫಲವಾದರೂ ಜನಸಾಮಾನ್ಯರು ತಮ್ಮ ಆರ್ಥಿಕ ಏಳೆಗಾಗಿ ತಾವೇ ಸ್ವಯಂಸ್ಫೂರ್ತಿಯಿಂದ ಭಾಗವಹಿಸುವ ಮೂಲಕ ಈ ಆಂದೋಲನ ಯಶಸ್ವಿಯಾಗುವ ಅಗತ್ಯವಿರುವುದನ್ನು ಕೇಂದ್ರ ಯೋಜನಾ ಆಯೋಗ ಗುರುತಿಸಿತು. ಸರ್ಕಾರದ ಹಸ್ತಕ್ಷೇಪ ತಡೆಯಬಲ್ಲ, ಸದಸ್ಯರಿಗೆ ಹೆಚ್ಚು ಅಧಿಕಾರ ನೀಡುವ ಹಾಗೂ ಅವರ ಸಹಭಾಗಿತ್ವ ಹೆಚ್ಚಿಸುವ ಸಹಕಾರಿ ಸಂಘಗಳಿಗೆ ಚಟುವಟಿಕೆ ನಡೆಸಲು ಮುಕ್ತ ವಾತಾವರಣ ನಿರ್ಮಿಸುವಂತಹ ಮಾದರಿ ಸಹಕಾರಿ ಕಾಯ್ದೆಯನ್ನು ರೂಪಿಸಲು ಚೌಧರಿ ಬ್ರಹ್ಮಪ್ರಕಾಶ ನೇತೃತ್ವದಲ್ಲಿ ಇನ್ನೊಂದು ಸಮಿತಿಯನ್ನು ನೇಮಿಸಿತು.
ಈ ಸಮಿತಿ 1991ರಲ್ಲಿ ವಿವಿಧ ರಾಜ್ಯಗಳಲ್ಲಿ ಪ್ರಸ್ತುತ ಜಾರಿಯಲ್ಲಿರುವ ಸಹಕಾರಿ ಕಾಯ್ದೆಗಳ ಬಗ್ಗೆ ವಿವರವಾದ ಅಧ್ಯಯನ ನಡೆಸಿ ಸ್ವಾಯತ್ತತೆ, ಸ್ವಯಂ ಆಡಳಿತ, ಸ್ವಯಂ ನಿಯಂತ್ರಣದಿಂದ ಕೂಡಿದ ಒಂದು ಮಾದರಿ ಕಾಯ್ದೆ ರೂಪಿಸಿತು. ಯೋಜನಾ ಆಯೋಗದಿಂದ ಈ ಮಾದರಿ ಸಹಕಾರಿ ಕಾಯ್ದೆಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿ ಎಲ್ಲ ರಾಜ್ಯ ಸರ್ಕಾರಗಳಿಗೆ ಕಳುಹಿಸಿತು ಎಂದರು.ಸೌಹಾರ್ದ ಸಹಕಾರಿ ಕಾಯ್ದೆ ಇಡಿ ದೇಶದಲ್ಲಿಯೇ ಮಾದರಿಯಾಗಿದೆ. ಇದರ ನಂತರ 2008ರಲ್ಲಿ ವೈದ್ಯನಾಥನ್ ಅವರ ವರದಿಯಂತೆ ಎಲ್ಲ ಕೃಷಿ ಪತ್ತಿನ ಸಹಕಾರ ಸಂಘಗಳು ಸ್ವಾಯತ್ತತೆ ಸ್ವಯಂ ಆಡಳಿತ ಸ್ವಯಂ ನಿಯಂತ್ರಣದ ಆಧಾರದ ಮೇಲೆ ಬೆಳೆಯಬೇಕು ಎಂದು ಹೇಳಿದೆ.
ಸಹಕಾರ ಸಂಘಗಳ ಕಾಯ್ದೆ 1959ರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ತಿನ ಸಹಕಾರ ಸಂಘಗಳ ಕುರಿತು ಮತ್ತು ಸೌಹಾರ್ದ ಪತ್ತಿನ ಸಂಘಗಳ ಕುರಿತು 2024 ಮಾ. 16ರಂದು ಸರ್ಕಾರವು ಹೊರಡಿಸಿರುವ ಆದೇಶವನ್ನು ಕೂಡಲೆ ಹಿಂಪಡೆಯಬೇಕು. ಇಲ್ಲದಿದ್ದರೆ ಸಹಕಾರಿಗಳು ಬೀದಿಗಿಳಿದು ಹೋರಾಟ ಮಾಡ ಬೇಕಾಗುತ್ತದೆ ಎಂದು ಎಚ್ಚರಿಸಿದರು.ಒಕ್ಕೂಟದ ಜಿಲ್ಲಾಧ್ಯಕ್ಷ ಚೆನ್ನಬಸಪ್ಪ ಕಡ್ಡಿಪುಡಿ, ನಾಗಲಿಂಗಪ್ಪ ಪತ್ತಾರ, ಲೋಕೇಶ, ಎಚ್. ರಾಜಶೇಖರ್ ವಕೀಲರು, ಗವಿಸಿದ್ದಯ್ಯತಾತಾ, ಕೋಮಾರೆಪ್ಪ, ಓಂಕಾರ್ ಇದ್ದರು.