-ಮೇಣದ ಬತ್ತಿಯ ಬೆಳಕಿನಲ್ಲಿ ವೀರಶೈವ ಜಂಗಮ ಸಮಾಜದ ಪ್ರತಿಭಟನೆ-ಹಂತಕರ ವಿರುದ್ಧ ಕಠಿಣ ಕ್ರಮಕ್ಕೆ ಮುರುಗೇಶ, ರುದ್ರಮುನಿಸ್ವಾಮಿ ಆಗ್ರಹ
---ಕನ್ನಡಪ್ರಭ ವಾರ್ತೆ ದಾವಣಗೆರೆರೇಣುಕಾಸ್ವಾಮಿ ಹತ್ಯೆ ಖಂಡಿಸಿ ವೀರಶೈವ ಜಂಗಮ ಸಮಾಜದಿಂದ ದಾವಣಗೆರೆ ನಗರದಲ್ಲಿ ಸೋಮವಾರ ಸಂಜೆ ಮೇಣದ ಬತ್ತಿ ಬೆಳಗಿಸುವ ಮೂಲಕ ಪ್ರತಿಭಟಿಸಲಾಯಿತು. ನಗರದ ಶ್ರೀ ಜಯದೇವ ವೃತ್ತದಲ್ಲಿ ವೀರಶೈವ ಜಂಗಮ ಸಮಾಜದ ಮುಖಂಡರ ನೇತೃತ್ವದಲ್ಲಿ ಮೇಣದ ಬತ್ತಿ ಬೆಳಕಿನ ಮೂಲಕ ಪ್ರತಿಭಟಿಸಿದ ಸಮಾಜದ ಬಾಂಧವರು ಬೆಂಗಳೂರಿನಲ್ಲಿ ಹತ್ಯೆಯಾದ ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಿದರು. ಕೊಲೆಗಡುಕರನ್ನು ಗಲ್ಲಿಗೇರಿಸಬೇಕು, ಚಿತ್ರನಟ ದರ್ಶನ್ ರಾಜ್ಯ ಬಿಟ್ಟು ತೊಲಗಲಿ ಎಂಬ ಘೋಷಣೆ ಕೂಗಿದರು. ಇದೇ ವೇಳೆ ಮಾತನಾಡಿದ ಸಮಾಜದ ಮುಖಂಡ ಎನ್.ಎ.ಮುರುಗೇಶ ಆರಾಧ್ಯ, ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದೊಯ್ದು, ಅಮಾನನೀಯವಾಗಿ ವರ್ತಿಸಿ ಪೈಶಾಚಿಕವಾಗಿ ಹತ್ಯೆ ಮಾಡಲಾಗಿದೆ. ನಟ ದರ್ಶನ್ ಮತ್ತು ಆತನ ಗ್ಯಾಂಗ್ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿದ್ದು ಘೋರ ಅಪರಾಧ. ಇಂತಹ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದರು. ದರ್ಶನ್ ಎಷ್ಟೇ ಪ್ರಭಾವಿಯಾಗಿದ್ದರೂ ಅದಕ್ಕೆ ಯಾವುದೇ ಸೊಪ್ಪು ಹಾಕದೇ, ಬಂಧಿಸಿರುವ ಬೆಂಗಳೂರಿನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ಮೇಲೆ ರಾಜ್ಯದ ಜನತೆಗೆ ಪೊಲೀಸ್ ಇಲಾಖೆ ಮೇಲೆ ಮತ್ತಷ್ಟು ನಂಬಿಕೆ, ವಿಶ್ವಾಸ ಮೂಡುವಂತೆ ಮಾಡಿದೆ. ಈ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಬೆಂಗಳೂರಿನ ದಕ್ಷ ಪೊಲೀಸ್ ಅಧಿಕಾರಿಗಳು ರವಾನಿಸಿದ್ದಾರೆ ಎಂದು ಶ್ಲಾಘಿಸಿದರು. ಯುವ ಮುಖಂಡ ಎಚ್.ಎಂ.ರುದ್ರಮುನಿಸ್ವಾಮಿ ಮಾತನಾಡಿ, ಸಿನಿಮಾಗಳಲ್ಲಿ ಕ್ರೌರ್ಯ, ದ್ವೇಷ, ಹತ್ಯೆ, ಕೊಲೆ ಸುಲಿಗೆಯಂತಹದ್ದು ವಿಜೃಂಭಿಸುತ್ತಿದೆ. ಇದರಿಂದ ಅಪರಾಧ ಕೃತ್ಯಗಳಿಗೆ ಪ್ರಚೋದನೆ ಪ್ರೋತ್ಸಾಹ ನೀಡಿದಂತಾಗಿದೆ. ಆದ್ದರಿಂದ ಇಂತಹ ಸಿನಿಮಾಗಳು, ಧಾರವಾಹಿಗಳು ಮತ್ತು ವೆಬ್ ಸರಣಿಗಳ ಮೇಲೆ ಕೇಂದ್ರ ಸರ್ಕಾರವು ನಿಷೇಧ ಹೇರಬೇಕು. ಸೆನ್ಸಾರ್ ಮಂಡಳಿಯೂ ಇಂತವರ ಸಿನಿಮಾಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು. ಸಿನಿಮಾಗಳೇ ಬೇರೆ, ನಿಜ ಜೀವನವೇ ಬೇರೆ. ಆದರೆ ದರ್ಶನ್ ಮತ್ತು ಡಿ ಗ್ಯಾಂಗ್‌ನವರು ಜೀವನವನ್ನೇ ಸಿನಿಮಾ ಅಂದುಕೊಂಡಂತಿದೆ. ವಯೋವೃದ್ಧ ತಂದೆ ತಾಯಿ, 5 ತಿಂಗಳ ಗರ್ಭಿಣಿಯ ಪುಟ್ಟ ಸಂಸಾರಕ್ಕೆ ಆಸರೆಯಾಗುವರು ಯಾರು ಎಂದು ಆಕ್ರೋಶ ಹೊರ ಹಾಕಿದರು. ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಎ.ಎಂ.ಕೊಟ್ರೇಶ, ಹಿರಿಯ ಪತ್ರಕರ್ತ ಬಾ.ಮ.ಬಸವರಾಜಯ್ಯ, ದಾಕ್ಷಾಯಣಮ್ಮ, ಪುಷ್ಪಾ, ರಾಜೇಶ್ವರಿ, ಕವಿತಾ, ಪಿ.ಜಿ.ರಾಜಶೇಖರಯ್ಯ, ಆರ್.ವಿ.ಶಿರಸಾಲಿಮಠ, ಬಿ.ಜಿ.ಚಂದ್ರಶೇಖರಯ್ಯ, ಎಂ.ಉಮಾಪತಯ್ಯ, ಪಾಲಾಕ್ಷಯ್ಯ, ಮಟ್ಟಿಕಲ್ಲು ವೀರಭದ್ರಸ್ವಾಮಿ, ಅಣಜಿ ಬಸವರಾಜ, ಬನ್ನಯ್ಯ ಸ್ವಾಮಿ, ಶಂಕರಗೌಡ ಬಿರಾದಾರ್, ಹರೀಶ, ಸಾಗರ್ ಪಾಟೀಲ್, ಮಂಜುನಾಥ ಇತರರು ಇದ್ದರು...............17ಕೆಡಿವಿಜಿ2021
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಖಂಡಿಸಿ ದಾವಣಗೆರೆಯಲ್ಲಿ ಸೋಮವಾರ ಸಂಜೆ ವೀರಶೈವ ಜಂಗಮ ಸಮಾಜದಿಂದ ಮೇಣದ ಬತ್ತಿ ಬೆಳಕಿಗಿಸುವ ಮೂಲಕ ಪ್ರತಿಭಟಿಸಲಾಯಿತು.