ರಟ್ಟೀಹಳ್ಳಿ: ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ ಹಾಗೂ ತಾಲೂಕಿನಾಧ್ಯಂತ ನಡೆಯುತ್ತಿರುವ ಅಕ್ರಮ ಚಟುವಟಿಕೆ ವಿರುದ್ಧ ತಾಲೂಕು ಬಿಜೆಪಿ ವತಿಯಿಂದ ನೂರಾರು ರೈತರು ಹಾಗೂ ಸಾರ್ವಜನಿಕರ, ಪಕ್ಷದ ಅಭಿಮಾನಿಗಳ ನೇತೃತ್ವದಲ್ಲಿ ಮಹಾಲಕ್ಷ್ಮೀ ವೃತ್ತದಲ್ಲಿ ನೂರಾರು ಟ್ರ್ಯಾಕ್ಟರ್ ಮೂಲಕ ಡಿ. 6ರಂದು ಮುಂಜಾನೆ 10.30ಕ್ಕೆ ಹೆದ್ದಾರಿ ಬಂದ್ ಮಾಡುವ ಮೂಲಕ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಸಂಕಷ್ಟದಲ್ಲಿರುವ ರೈತರ ನೆರವಿಗ ಬರಬೇಕಾದ ಸರಕಾರ ಸಿಎಂ ಕುರ್ಚಿಗಾಗಿ ಕಿತ್ತಾಡಿಕೊಂಡು ಅನ್ನ ನೀಡುವ ರೈತನನ್ನು ಕಡೆಗಣಿಸುತ್ತಿರುವುದು ಅಕ್ಷ್ಯಮ್ಮ ಅಪರಾಧ. ಜಿಲ್ಲಾದ್ಯಂತ ಮೆಕ್ಕೆಜೋಳ ಖರೀದಿ ಕೇಂದ್ರ ಹೋರಾಟಗಳು ಹೆಚ್ಚಾಗಿದ್ದರಿಂದ ರೈತರ ಮುಗಿಗೆ ತುಪ್ಪ ಸವರುವ ಕಾರ್ಯ ಮಾಡುತ್ತಿರುವ ಮುಖ್ಯಮಂತ್ರಿ ಸರಕಾರದಿಂದ ಎಕರೆಗೆ 5 ಕ್ವಿಂಟಲ್ ಖರೀದಿ ಮಾಡುವಂತೆ ಆದೇಶ ಹೋರಡಿಸಿದ್ದು, ಅದನ್ನೇ ತಾಲೂಕಿನ ಶಾಸಕರು ದೊಡ್ಡದಾಗಿ ಫೋಟೋ ಹಾಕಿ ₹2400ರಂತೆ ಖರೀದಿ ಮಾಡುತ್ತೇವೆ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಅವರಿಗೆ ಖರೀದಿ ನಿಯಮ ಗೋತ್ತಿಲ್ಲವೇ? ಮೆಕ್ಕೆಜೋಳವನ್ನು ಸರಕಾರ ಖರೀದಿ ಮಾಡುತ್ತಿಲ್ಲ. ಬದಲಾಗಿ, ಬಿಸ್ಲೇರಿ ಹಾಗೂ ಕೆ.ಎಂ.ಎಫ್. ನವರಿಗೆ ಹೇಳಿದ್ದೇವೆ ಎಂದು ಆದೇಶ ಮಾಡಿದ್ದು, ಖರೀದಿಸಿದ ಹಣ ಕೊಡುವವರು ಯಾರು ಎಂದು ಪ್ರಶ್ನಿಸಿದರು? ರೈತರ ಹೋರಾಟವನ್ನು ದಮನ ಮಾಡುವ ತಂತ್ರವಾಗಿದ್ದು ಇದಾಗಿದ್ದು, ಇಂತಹ ಆದೇಶಗಳನ್ನು ರೈತರಾಗಲಿ, ಬಿಜೆಪಿಯಾಗಲಿ ಒಪ್ಪುವುದಿಲ್ಲ. ರೈತ ಬೆಳೆದ ಸಂಪೂರ್ಣ ಮೆಕ್ಕೆಜೋಳವನ್ನು ಸರಕಾರವೆ ಖರೀದಿ ಮಾಡಿ ರೈತರಿಗೆ ನೆರವಾಗಬೇಕು. ಆದರೆ, ಸರಕಾರ ರೈತರ ಹೋರಾಟಕ್ಕೆ ಕ್ಯಾರೆ ಎನ್ನುತ್ತಿಲ್ಲ. ಆದ್ದರಿಂದ ಡಿ. 6ರ ಶನಿವಾರ ಮುಂಜಾನೆ 10.30ಕ್ಕೆ ಸರಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ, ಓಸಿ, ಇಸ್ಪೀಟ್ ಕ್ಲಬ್‍ಗಳು ತಲೆ ಎತ್ತಿದ್ದು, ಸರ್ಕಾರ ಸಾಮಾನ್ಯ ಜನರ ಜೀವನ ಜೊತೆ ಚೆಲ್ಲಾಟವಾಡುತ್ತಿದೆ. ಎಲ್ಲ ಕೃತ್ಯಗಳಲ್ಲಿ ಸರಕಾರ ಹಾಗೂ ಅಧಿಕಾರಿಗಳು ಲಂಚ ಪಡೆದು ತಮ್ಮ ಅಧೀನದಲ್ಲೇ ಅಕ್ರಮಗಳಿಗೆ ಸಹಕಾರ ನೀಡುತ್ತಿರುವುದು ದುರ್ದೈವ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಮಾಸೂರ ಹಾಗೂ ರಟ್ಟೀಹಳ್ಳಿ ತಾಲೂಕು ಆರೋಗ್ಯ ಕೇಂದ್ರವನ್ನು ಕೆಳ ದರ್ಜೆಗೆ ಇಳಿಸಿರುವುದರ ವಿರುದ್ಧ ಹಾಗೂ 2020-22ರಲ್ಲಿ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ರೈತರಿಂದ ₹25ಸಾವಿರ ಹಣ ಕಟ್ಟಿಸಿಕೊಂಡು ಇದುವರೆಗೂ ಟಿಸಿಗಳನ್ನು ಒದಗಿಸಿಲ್ಲ. ಅಸಮರ್ಪಕ ವಿದ್ಯುತ್ ಪೂರೈಕೆ, ಪಟ್ಟಣದಲ್ಲಿ 2 ಇಸ್ಪೀಟ್ ಕ್ಲಬ್‍ಗಳು ನಿಯಮ ಬಾಹಿರವಾಗಿ ನಡೆಯುತ್ತಿದ್ದು, ಅವುಗಳನ್ನು ಬಂದ್ ಮಾಡಿಸುವಂತೆ ಗೃಹ ಸಚಿವರಿಗೆ, ಡಿಜಿ, ಐಜಿಗಳಿಗೆ ಪತ್ರ ಬರೆದರೂ ಈ ಬಗ್ಗೆ ಉತ್ತರ ಸಿಗದ ಹಿನ್ನೆಲೆಯಲ್ಲಿ ಹೆದ್ದಾರಿ ಬಂದ್ ಮಾಡಲಾಗುವುದು. ರಟ್ಟೀಹಳ್ಳಿ, ಹಿರೇಕೆರೂರ ತಾಲೂಕಿನ ಎಲ್ಲ ಬಿಜೆಪಿ ಕಾರ್ಯಕರ್ತರು, ಮುಖಂಡರು, ರೈತ ಮುಖಂಡರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೋಳ್ಳುವಂತೆ ಮನವಿ ಮಾಡಿದರು.ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ, ಮಾಲತೇಶಗೌಡ ಗಂಗೋಳ, ಪಪಂ ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಸದಸ್ಯರಾದ ಬಸವರಾಜ ಆಡಿನವರ, ಬಸವರಾಜ ಕಟ್ಟಿಮನಿ, ರವಿ ಹದಡೇರ, ಲಕ್ಷ್ಮೀ ಚಿಕ್ಕಮೊರಬ, ಮಂಜುಳಾ ಅಗಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂದೀಪ ಪಾಟೀಲ್, ಹನುಮಂತಪ್ಪ ಗಾಜೇರ, ಸುಶೀಲ್ ನಾಡಿಗೇರ, ರಾಘವೇಂದ್ರ ಹರವಿಶೆಟ್ಟರ್, ಸುರೇಶ ವಾಲ್ಮೀಕಿ, ಮಂಜು ತಳವಾರ, ಪ್ರಕಾಶ ಕೊರವರ, ಸುನೀಲ ಕಟ್ಟಿಮನಿ ಮುಂತಾದವರು ಇದ್ದರು.