ಕಂಪ್ಲಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಿಪಂ ಸಿಇಒ ಮೊಹಮ್ಮದ್ ಹ್ಯಾರೀಸ್ ಸುಮೇರ್ ಬುಧವಾರ ಭೇಟಿ ನೀಡಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ಪರಿಶೀಲನಾ ಸಂದರ್ಭದಲ್ಲಿ ಹೊಸ ನೆಲ್ಲೂಡಿ ಪ್ರಾಥಮಿಕ ಶಾಲೆಯನ್ನು ಭೇಟಿ ಮಾಡಿದ ಸಿಇಒ, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳ ಗಣಿತದ ಕಲಿಕಾ ಮಟ್ಟ ಪರಿಶೀಲಿಸಿ, ಅನೇಕ ಮಕ್ಕಳಿಗೆ ಮೂಲ ಗುಣಕಾರ ಲೆಕ್ಕವೇ ಸರಿಯಾಗಿ ಬರುತ್ತಿಲ್ಲವೆಂದು ಕಂಡು ಸ್ವತಃ ಅವರೇ ವಿದ್ಯಾರ್ಥಿಗಳಿಗೆ ಮೂಲಭೂತ ಗಣಿತ ಪಾಠಗಳನ್ನು ಬೋಧಿಸಿದರು.ಇನ್ನು ಗಣಿತ ಶಿಕ್ಷಕರು ಪರಿಣಾಮಕಾರಿಯಾಗಿ ಬೋಧನೆ ನಡೆಸಿಲ್ಲ. ಅವರ ವಿರುದ್ಧ ಶೋಕಾಸ್ ನೋಟಿಸ್ ನೀಡಿದ್ದೇನೆ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಮುಂದಿನ 10 ದಿನಗಳಲ್ಲಿ ಸಂಕಲನ, ವ್ಯವಕಲನ, ಗುಣಕಾರ, ಭಾಗಾಕಾರ, ಮಗ್ಗಿ ಪೂರ್ಣವಾಗಿ ಬೋಧಿಸಬೇಕು ಎಂದು ಶಿಕ್ಷಕರಿಗೆ ಕಡ್ಡಾಯ ಸೂಚನೆ ನೀಡಿದ್ದು, ನಿರ್ಲಕ್ಷ್ಯ ಕಂಡುಬಂದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ನಂ.10 ಮುದ್ದಾಪುರದ ಎಸ್ಸಿ ಕಾಲನಿಯಲ್ಲಿ ನೀರು ಪೂರೈಕೆ ಸರಿಯಾಗಿ ನಡೆಯದಿರುವ ಬಗ್ಗೆ ಸ್ಥಳೀಯರು ನೀಡಿದ ದೂರು ಕುರಿತು ಪರಿಶೀಲಿಸಿದ ಸಿಇಒ, ಅಲ್ಲಿ ನೀರು ವ್ಯರ್ಥವಾಗಿ ಹರಿಯುತ್ತಿರುವುದನ್ನು ಗಮನಿಸಿ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಜೆಜೆಎಂ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿಪಡಿಸಿದ ನಂತರವೇ ಬಿಲ್ ಪಾವತಿಸುವುದಾಗಿ ಸ್ಪಷ್ಟಪಡಿಸಿದರು. ಇದಲ್ಲದೆ, ಹೊಸ ನೆಲ್ಲೂಡಿ ಗ್ರಾಮದ ಪುಸ್ತಕದ ಗೂಡಿನಲ್ಲಿ ಪುಸ್ತಕಗಳನ್ನು ಸರಿಯಾಗಿ ಸಂಗ್ರಹಿಸಿ ನಿರ್ವಹಿಸುವಂತೆ ಗ್ರಾಮ ಪಂಚಾಯಿತಿಗೆ ಸೂಚನೆ ನೀಡಿದರು. ಗ್ರಾಮಸ್ಥರು ಪುಸ್ತಕಗಳ ಸದ್ಬಳಕೆ ಮಾಡಿಕೊಂಡು ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಎ.ಎಸ್. ಯಲ್ಲಪ್ಪ ಮಾತನಾಡಿ, ಅಂಬೇಡ್ಕರ್ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ ಸುಗಮಗೊಳಿಸಲು, ಆರ್‌ಒ ಪ್ಲಾಂಟ್ ವ್ಯವಸ್ಥೆ ಒದಗಿಸಲು ಹಾಗೂ ಮೂಲಭೂತ ಸೌಕರ್ಯಗಳ ಬಲಪಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಇದೇ ವೇಳೆ ಕಂಪ್ಲಿ- ಕುರುಗೋಡು ಮುಖ್ಯರಸ್ತೆಯಿಂದ ಹಳೆ ನೆಲ್ಲೂಡಿ ಗ್ರಾಮದವರೆಗಿನ ರಸ್ತೆ ಕಾಮಗಾರಿಯ ಗುಣಮಟ್ಟ, ನಂ.2 ಮುದ್ದಾಪುರದಿಂದ ಕೊಂಡಯ್ಯ ಕ್ಯಾಂಪ್‌ತನಕ ನಿರ್ಮಿಸಲಾಗಿರುವ ಸಿಸಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ, ಎಮ್ಮಿಗನೂರು–ಇಟಗಿ ಗ್ರಾಮಗಳನ್ನು ಸಂಪರ್ಕಿಸುವ ಸಿಸಿ ರಸ್ತೆ ಕಾಮಗಾರಿಗಳನ್ನೂ ಅವರು ಸ್ಥಳೀಯ ಅಧಿಕಾರಿಗಳ ಜೊತೆ ಪರಿಶೀಲಿಸಿದರು.ಈ ಸಂದರ್ಭದಲ್ಲಿ ತಾಪಂ ಇಒ ಆರ್.ಕೆ. ಶ್ರೀಕುಮಾರ್, ಎಇಇ ರಾಮಚಂದ್ರ, ಎಇ ಕೆ.ಬಿ. ರವೀಂದ್ರ, ಪಿಡಿಒ ಶಿಲ್ಪಾರಾಣಿ ಸೇರಿದಂತೆ ಸ್ಥಳೀಯ ಪ್ರತಿನಿಧಿಗಳಾದ ಕುಮಾರಸ್ವಾಮಿ, ಸ್ವಾಮಿ, ಬಸವರಾಜ, ಬಸವನಗೌಡ ಇದ್ದರು.