ಗಂಗಾವತಿ: ಆಂಜನೇಯಸ್ವಾಮಿ ನಾಮಸ್ಮರಣೆಯ ಮೂಲಕ ದೇಶ, ಧರ್ಮ ರಕ್ಷಣೆಗೆ ಯುವಕರು ಸಂಕಲ್ಪ ಮಾಡುವ ಉದ್ದೇಶದಿಂದ ಹನುಮಮಾಲೆ ವ್ರತಾಚರಣೆ ನಡೆಯುತ್ತದೆ. ರಾಮ, ಹನುಮಂತ ಈ ರಾಷ್ಟ್ರದ ಪ್ರತೀಕರಾಗಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ತಿನ ರಾಷ್ಟ್ರೀಯ ಸಹ ಕಾರ್ಯದರ್ಶಿ ಕೇಶವರಾಜ ಹೇಳಿದರು.
ಪ್ರಭು ಶ್ರೀರಾಮನ ಮಂದಿರ ಕಟ್ಟುವ ಸಂಕಲ್ಪ ಮಾಡಿದ್ದ ವಿಶ್ವ ಹಿಂದು ಪರಿಷತ್ ದೇಶದ ಸಮಸ್ತ ಹಿಂದು ಸಮಾಜವನ್ನು ಒಗ್ಗೂಡಿಸಿ ಮಂದಿರ ನಿರ್ಮಾಣ ಮಾಡಿದೆ. ರಾಮಮಂದಿರ ಈ ದೇಶದ ಅಸ್ಮಿತೆಯಾಗಿದೆ. ಧರ್ಮ ಕಾರ್ಯದ ಮೂಲಕ ರಾಷ್ಟ್ರ ಕಾರ್ಯ ಮಾಡಬೇಕು. ಆದರೆ ಇಂದು ದೇಶದಲ್ಲಿ ಧರ್ಮ ವಿರೋಧಿ ಷಡ್ಯಂತರ ಜೋರಾಗಿ ನಡೆಯುತ್ತವೆ. ಹಿಂದು ಸಮಾಜದ ಮೇಲೆ ಜಿಹಾದಿ ಮತ್ತು ವಾಮ ಪಂಥೀಯ ಮನಸ್ಸುಗಳು ಆಕ್ರಮಣ ಮಾಡುತ್ತಿವೆ. ಇದಕ್ಕೆ ದೇಶದ ಯುವಕರು ತಕ್ಕ ಉತ್ತರ ನೀಡಬೇಕು ಎಂದರು.
ಕರ್ನಾಟಕದಲ್ಲಿ ಡ್ರಗ್, ಲಿಕ್ಕರ್ ಲಾಬಿಯಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಹಿಂದು ಸಮಾಜದ ವಿರುದ್ಧದ ಮಾನಸಿಕತೆ ನಿರ್ಮಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಇಂತಹ ಹಿಂದು ವಿರೋಧಿ ಶಕ್ತಿ ಎದುರಿಸಲು ಯುವಕರು ಸಜ್ಜಾಗಬೇಕು. ಹನುಮಂತನ ಸ್ಮರಣೆ ಮೂಲಕ ಸಮಾಜ ಸುಧಾರಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.ವಿಎಚ್‌ಪಿ ರಾಷ್ಟ್ರೀಯ ಸಂಯೋಜಕ ನಿರಜ್‌ಭಾಯ್ ಮಾತನಾಡಿ, ವೈದ್ಯರ ವೇಷದಲ್ಲಿ ಉಗ್ರರು ದಾಳಿ ಮಾಡುವಂತ ಸನ್ನಿವೇಶ ನಾವು ಎದುರಿಸಬೇಕಾಗಿದೆ. ಹೀಗಾಗಿ ಹಿಂದು ಸಮಾಜ ಒಂದಾಗಿ ಕಾರ್ಯಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಆನೆಗೊಂದಿ ಸರಸ್ವತಿ ಪೀಠದ ನೀಲಕಂಠಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಧರ್ಮಸಭೆಯಲ್ಲಿ ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಕಾರ್ಯದರ್ಶಿ ಶಿವಕುಮಾರ, ಕೊಪ್ಪಳ ಜಿಲ್ಲಾಧ್ಯಕ್ಷ ಡಾ. ಸಂಗಮೇಶ ಹಿರೇಮಠ, ಜಿಲ್ಲಾ ಉಪಾಧ್ಯಕ್ಷ ಉಗಮರಾಜ್ ಜೈನ್, ಜಿಲ್ಲಾ ಕಾರ್ಯದರ್ಶಿ ವಿನಯ ಪಾಟೀಲ್, ಬಸವರಾಜ ಸೂಗೂರು, ಪುಂಡಲೀಕ ದಳವಾಯಿ, ಸಂತೋಷ್, ಮಲ್ಲಿಕಾರ್ಜುನ ಮತ್ತಿತರು ಇದ್ದರು. ಸದಾನಂದಶೆಟ್ ವೈಯಕ್ತಿಕ ಗೀತೆ ಹಾಡಿದರು.
ನಗರಸಭೆ ಸದಸ್ಯೆ ಸುಚೇತಾ ಸಿರಿಗೇರಿ, ರಘುನಾಥ ಪವಾರ್ ತಂಡ ಹನುಮಮಾನ ಚಾಲೀಸ್ ಪಠಣ ಮಾಡಿದರು.ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮಗೌಡ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣ ಸಾಹೇಬ ಜೊಲ್ಲೆ, ಸಂತೋಷ ಕೆಲೋಜಿ, ಬಿಜೆಪಿ ಮುಖಂಡ ವಿರುಪಾಕ್ಷಪ್ಪ ಸಿಂಗನಾಳ, ಲಲಿತಾರಾಣಿ ಶ್ರೀರಂಗದೇವರಾಯಲು, ತಿಪ್ಪೇರುದ್ರಸ್ವಾಮಿ, ಲಂಕೇಶ, ಚನ್ನಪ್ಪ ಮಳಗಿ, ಸಂಗಮೇಶ ಅಯೋಧ್ಯಾ ಸೇರಿದಂತೆ ವಿವಿಧ ಸಮಾಜದ ಮುಖಂಡರು ಧರ್ಮಸಭೆಯಲ್ಲಿ ಉಪಸ್ಥಿತರಿದ್ದರು.