ನೌಕಾನೆಲೆಯಲ್ಲಿ ಚಿರತೆ ಓಡಾಟ, ಆತಂಕ

KannadaprabhaNewsNetwork |  
Published : Dec 04, 2025, 02:30 AM IST
ಚಿರತೆ ಸಂಚಾರ  | Kannada Prabha

ಸಾರಾಂಶ

ಕದಂಬ ವಸತಿ ಗೃಹಗಳ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ಇಲ್ಲಿನ ಐಎನ್‌ಎಸ್ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ಚಿರತೆಯೊಂದು ರಾಜಾರೋಷವಾಗಿ ಓಡಾಡುತ್ತಿದ್ದು, ನೌಕಾಪಡೆ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ಕಳೆದ ಎರಡು ತಿಂಗಳಿಂದ ಆತಂಕದಲ್ಲೇ ಕಾಲಕಳೆಯುವಂತಾಗಿದೆ. ಕದಂಬ ವಸತಿ ಗೃಹಗಳ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ಆರಂಭದಲ್ಲಿ ಕೇವಲ ರಾತ್ರಿ ವೇಳೆ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಚಿರತೆ, ಇದೀಗ ಹಗಲು ಹೊತ್ತಿನಲ್ಲೂ ವಸತಿ ಗೃಹಗಳ ಬಾಗಿಲು ಹಾಗೂ ರಸ್ತೆಬದಿಗಳಲ್ಲಿ ಪ್ರತ್ಯಕ್ಷವಾಗುತ್ತಿದೆ. ಮಕ್ಕಳು ಆಟವಾಡುವ ಮೈದಾನ ಮತ್ತು ಕ್ವಾರ್ಟರ್ಸ್ ಹಿಂಭಾಗದಲ್ಲೇ ಚಿರತೆ ಸಂಚರಿಸುತ್ತಿರುವುದು ಪೋಷಕರ ನಿದ್ದೆಗೆಡಿಸಿದೆ. ಶಾಲೆಗೆ ಹೋಗುವ ಮಕ್ಕಳು ಮತ್ತು ರಾತ್ರಿ ಪಾಳಿಯ ಸಿಬ್ಬಂದಿ ಮೇಲೆ ಯಾವುದೇ ಕ್ಷಣದಲ್ಲಿ ದಾಳಿ ನಡೆಯುವ ಸಾಧ್ಯತೆಯಿದ್ದು, ದೇಶದ ರಕ್ಷಣೆ ಮಾಡುವ ಸಿಬ್ಬಂದಿ ಕುಟುಂಬಗಳಿಗೆ ರಕ್ಷಣೆಯೇ ಇಲ್ಲಿ ಇಲ್ಲದಂತಾಗಿದೆ ಎಂದು ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೌಕಾನೆಲೆಯಲ್ಲಿ ವನ್ಯಜೀವಿಗಳ ನಿರ್ವಹಣೆಗೆ ಪ್ರತ್ಯೇಕ ಅರಣ್ಯ ಘಟಕವಿದ್ದರೂ, ಅಧಿಕಾರಿಗಳು ಕೇವಲ ಹೆಜ್ಜೆ ಗುರುತು ಪರಿಶೀಲನೆಗೆ ಮಾತ್ರ ಸೀಮಿತವಾಗಿದ್ದಾರೆ ಎಂಬುದು ಸ್ಥಳೀಯರ ಆರೋಪ. ರಕ್ಷಣಾ ವಲಯವಾದ್ದರಿಂದ ಹೊರಗಿನ ಅರಣ್ಯ ಇಲಾಖೆಗೂ ತಕ್ಷಣದ ಕ್ರಮ ಕೈಗೊಳ್ಳಲು ಇತಿಮಿತಿಗಳಿವೆ. ಹೀಗಿದ್ದರೂ, ಆಂತರಿಕ ಭದ್ರತಾ ಘಟಕವು ಚಿರತೆ ಸೆರೆಗೆ ಬೋನ್ ಅಳವಡಿಸುವುದಾಗಲಿ ಅಥವಾ ಸಿಸಿಟಿವಿ ಕಣ್ಗಾವಲು ಇಡುವುದಾಗಲಿ ಮಾಡಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.

ಯಾವುದೇ ಅಹಿತಕರ ಘಟನೆ ಅಥವಾ ಪ್ರಾಣಹಾನಿ ಸಂಭವಿಸುವ ಮುನ್ನ ನೌಕಾನೆಲೆ ಆಡಳಿತವು ಎಚ್ಚೆತ್ತುಕೊಳ್ಳಬೇಕಿದೆ. ಕೂಡಲೇ ಚಿರತೆ ಸಂಚರಿಸುವ ಜಾಗಗಳಲ್ಲಿ ಬೋನ್ ಅಳವಡಿಸಬೇಕು, ರಾತ್ರಿ ಗಸ್ತು ಹೆಚ್ಚಿಸಬೇಕು ಮತ್ತು ನಿವಾಸಿಗಳಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕು ಎಂದು ನೌಕಾಪಡೆ ಕುಟುಂಬಗಳು ಒತ್ತಾಯಿಸಿವೆ.

ಬಿಜೆಪಿಯಿಂದ ಇಂದು ಪ್ರತಿಭಟನೆ:

ರಾಜ್ಯದ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಕಾರವಾರ ಅಂಕೋಲಾ ವಿಧಾನಸಭಾ ವ್ಯಾಪ್ತಿಯ ಬಿಜೆಪಿಯಿಂದ ಡಿ. 4ರ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ರಾಜ್ಯ ಬಿಜೆಪಿ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕಿ ಹಾಗೂ ರೈತಪರ ಹೋರಾಟದ ಜಿಲ್ಲಾ ಸಂಚಾಲಕಿ ರೂಪಾಲಿ ಎಸ್.ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ಪಕ್ಷದ ಪ್ರಮುಖರು, ಜನಪ್ರತಿನಿಧಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು, ಜನತೆ ಭಾಗವಹಿಸಲಿದ್ದಾರೆ.ರಾಜ್ಯದಲ್ಲಿ ರೈತರು ಹತ್ತು ಹಲವು ಸಮಸ್ಯೆಗಳಿಂದ ಕಂಗೆಟ್ಟಿದ್ದಾರೆ. ರೈತರ ಸಂಕಷ್ಟ ಬಗೆಹರಿಸುವ ಬದಲು ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಆಂತರಿಕ ಕಲಹ ನಡೆಯುತ್ತಿದೆ. ಸರ್ಕಾರ ಕೂಡಲೇ ರೈತ ವಿರೋಧಿ ನೀತಿ ಕೈಬಿಟ್ಟು, ರೈತರ ಸಮಸ್ಯೆಗೆ ಪರಿಹಾರ ಒದಗಿಸಿ, ಅನ್ನದಾತನ ಸಂಕಷ್ಟ ಪರಿಹರಿಸಿ ಎಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಸಾರ್ವಜನಿಕರು, ರೈತರು ಪ್ರತಿಭಟನೆಯಲ್ಲಿ ಕೈಜೋಡಿಸುವಂತೆ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾಪ್ರತಿಭಟನೆ
ಜನಾಭಿಪ್ರಾಯದಡಿ ಪ್ರಜಾಸೌಧ ನಿರ್ಮಾಣ: ಎಸಿ ಶ್ವೇತಾ ಬೀಡಿಕರ