ಹೊಸಪೇಟೆ: ಮರಳು ಮತ್ತು ಎಂ.ಸ್ಯಾಂಡ್‌ನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ನಗರದಲ್ಲಿ ಬುಧವಾರ ಸಹಾಯಕ ಆಯುಕ್ತ ವಿವೇಕಾನಂದ ಅವರಿಗೆ ಮನವಿ ಸಲ್ಲಿಸಲಾಯಿತು.
ವಿಜಯನಗರ ಜಿಲ್ಲೆಯಾದ ನಂತರ ತಾಲೂಕಿನಲ್ಲಿ ಕಟ್ಟಡ ಕಾಮಗಾರಿಗಳ ಮನೆ ನಿರ್ಮಾಣ, ರಸ್ತೆ, ಪ್ಲೈಓವರ್, ಸರ್ಕಾರದ ಸ್ಲಂಬೋರ್ಡ್ ಮನೆಗಳು ಯಥೇಚ್ಛವಾಗಿ ನಡೆಯುತ್ತಿವೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಸಾಮಗ್ರಿಗಳ ಬೆಲೆಗಳು ಗಗನಕ್ಕೆ ತಲುಪಿವೆ. ನಗರದಲ್ಲಿ ಮಧ್ಯಮ ಹಾಗೂ ಬಡ ವರ್ಗದ ಜನರು ಊರಿನ ಹೊರಗೆ ನಿವೇಶನ ಕೊಳ್ಳಲು ಕನಿಷ್ಠ ₹25 ಲಕ್ಷ ಭರಿಸಬೇಕಿದೆ. ಸುಸಜ್ಜಿತ ಮನೆ ನಿರ್ಮಿಸಲು 20/30 ಕಟ್ಟಡ ನಿರ್ಮಾಣಕ್ಕೆ ₹15 ಲಕ್ಷ, 30/40ಕ್ಕೆ ಅಳತೆ ನಿವೇಶನದ ನಿರ್ಮಾಣಕ್ಕೆ ₹30 ಲಕ್ಷ ಇದ್ದರೆ ಮನೆ ಎಂಬಂತಾಗಿದೆ. ಇದರಿಂದ ದಿನಗೂಲಿ ಕೆಲಸಗಾರರು ಮತ್ತು ಮಧ್ಯಮ ವರ್ಗದ ಜನರ ಕನಸಿನ ಮನೆ ನನಸಾಗಿ ಉಳಿಯುತ್ತಿದೆ ಎಂದು ದೂರಿದರು.ಖಾಲಿ ನಿವೇಶನ ಬೆಲೆಗೆ ಭೂಮಾಫಿಯಾ ಕರಿನೆರಳು ಆವರಿಸಿದ್ದರೆ, ಕಟ್ಟಡ ನಿರ್ಮಾಣಕ್ಕೆ ಕಟ್ಟಡ ಸಾಮಗ್ರಿಗಳ ಬೆಲೆಗಳು ನಿಖರ ನಿರ್ದಿಷ್ಟ ಸರ್ಕಾರದ ಬೆಲೆಗಳಿಗೆ ವ್ಯಾಪಾರಸ್ಥರು ಮಾರಾಟ ಮಾಡದೇ ಮನಸೋ ಇಚ್ಛೆ ವ್ಯಾಪಾರ ವಹಿವಾಟು ನಡೆಸಿದ್ದಾರೆ. ಟ್ರ್ಯಾಕ್ಟರ್ ಮರಳು ₹4 ಸಾವಿರ, ಎಂ.ಸ್ಯಾಂಡ್ ₹2000, ಒಂದು ಲಾರಿ 20 ಸಾವಿರ ರು. ಸಿಗುತ್ತಿತ್ತು. ಕಳೆದ ಒಂದು ತಿಂಗಳಿನಿಂದ ಮರಳು ಮಾಫಿಯಾ ರಾಯಲ್ಟಿ ನೆಪದಲ್ಲಿ ಮರಳು ಅಭಾವ ಸೃಷ್ಟಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಆರಂಭಿಸಿದ್ದಾರೆ. ಬ್ಯಾಂಕ್ ಸಾಲ ಪಡೆದು ಮನೆ ಕಟ್ಟುವವರ ಪರಿಸ್ಥಿತಿ ಎರಡು ಪಟ್ಟು ಹಣ ಜೋಡಿಸುವ ಚಿಂತೆಯಾಗಿದೆ. ಇದ್ದರೆ ಸ್ಲಂ ಬೋರ್ಡ್ ಯೋಜನೆ ಪಡೆದವರಿಗೆ ಮಂಡಳಿ ಸಾಮಗ್ರಿಗಳನ್ನು ಕೊಡದೆ ಅರ್ಧಕ್ಕೆ ನಿಲ್ಲಿಸಿದ್ದಾರೆ. ಇವರ ಪರಿಸ್ಥಿತಿ ಕೇಳುವ ಜನಪ್ರತಿನಿಧಿಗಳೇ ಇಲ್ಲದಂತಾಗಿದೆ. ಕಟ್ಟಡ ನಿರ್ಮಾಣ ಕಾರ್ಮಿಕರು ಕೆಲಸವಿಲ್ಲದೇ ಗುಳೆ ಹೋಗುವುದನ್ನು ತಪ್ಪಿಸಬೇಕು. ಬೆಲೆ ಏರಿಕೆಯ ಮಾಫಿಯಾ ನೈಜ ಕಾರಣಗಳನ್ನು ಆಧರಿಸಿ ಮರಳು, ಇಟ್ಟಿಗೆ, ಸಿಮೆಂಟ್ ಮತ್ತು ಇತರೆ ಸಾಮಗ್ರಿಗಳ ಮಾರಾಟಗಾರರ ಸಭೆ ನಡೆಸಿ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಮರಳು ಸ್ಟಾಕ್‌ಯಾರ್ಡ್ ಬ್ಲಾಕ್‌ಗಳನ್ನು ಗುರುತಿಸಿ ಸರ್ಕಾರಿ ಬೆಲೆಗೆ ಮರಳನ್ನು ಗ್ರಾಹಕರಿಗೆ ವಿತರಿಸಬೇಕು. ಕೇರಳ ರಾಜ್ಯದ ಮಾದರಿಯಲ್ಲಿ ಈ ಮರಳು ನೀತಿಯನ್ನು ಜಾರಿಗೊಳಿಸಬೇಕು. ಮರಳು, ಎಂ.ಸ್ಯಾಂಡ್ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವವರ ಮೇಲೆ ಕ್ರಮಕ್ಕೆ ಮುಂದಾಗಬೇಕು. ಖಾಸಗಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ಯೋಜನೆಗೊಂಡ ನಿವೇಶನಗಳು ಬಡವರ ಕೈಗೆಟುಕುವಂತೆ ಸರ್ಕಾರದ ನಿರ್ದಿಷ್ಟ ಬೆಲೆಗಳಿಗೆ ಮಾರಾಟವಾಗುವಂತೆ ಲೇ ಔಟ್ ಮಾಲೀಕರಿಗೆ ನಿರ್ದೇಶನ ನೀಡಬೇಕು. ಕಬ್ಬಿಣ, ಸ್ಟೀಲ್, ಸಿಮೆಂಟ್, ಪ್ಲಂಬಿಂಗ್, ವೈರಿಂಗ್, ಟೈಲ್ಸ್ ಬೆಲೆಗಳು ಇಳಿಸಬೇಕು. ನಿವೇಶನ ರಹಿತ ಕಟ್ಟಡ ಕಾರ್ಮಿಕರು ನಗರಸಭೆಗೆ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.ಮುಖಂಡರಾದ ಎನ್. ಯಲ್ಲಾಲಿಂಗ, ಎಂ. ಗೋಪಾಲ್, ಹೇಮಂತ್ ನಾಯ್ಕ ಇದ್ದರು.