ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮುಂದಿನ ಪೀಳಿಗೆಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ತಿಳಿಸಿಕೊಡಬೇಕಾಗಿದ್ದು, ಸೆ.15 ರಂದು ಆಚರಿಸಲಾಗುತ್ತಿರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಮಾನವ ಸರಪಳಿ ನಿರ್ಮಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ಜಿಪಂ ನೂತನ ಸಭಾಂಗಣದಲ್ಲಿ ಜರುಗಿದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದಲ್ಲಿ ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಅನಕ್ಷರಸ್ಥರು ಇರುವುದರಿಂದ ಹಾಗೂ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಮುಂದಿನ ಪೀಳಿಗೆಯು ಪ್ರಜಾಪ್ರಭುತ್ವದ ಮೌಲ್ಯಾನುಸಾರ ಶಕ್ತವಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರು ಮಾತನಾಡಿ, ಬಾಗಲಕೋಟೆ ಜಿಲ್ಲೆಗೆ ಸಂಬಂಧಿಸಿದಂತೆ ಮಾನವ ಸರಪಳಿಯನ್ನು ಆಲಮಟ್ಟಿಯಿಂದ ಸೀತಿಮನಿ, ಸಂಗಮ ಕ್ರಾಸ್, ಬಾಗಲಕೋಟೆ, ಲೋಕಾಪುರ ಮುಖಾಂತರ ಬೆಳಗಾವಿ ಜಿಲ್ಲೆಯ ಸಾಲಹಳ್ಳಿಯ ವರೆಗೆ ಒಟ್ಟು 105 ಕಿ.ಮೀ ವರೆಗೆ 1.50 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. ಬೆಳಿಗ್ಗೆ 9.30 ರಿಂದ 10.30 ಗಂಟೆಯವರೆಗೆ ಮಾನವ ಸರಪಳಿಯನ್ನು ರಚಿಸಲು ಉದ್ದೇಶಿಸಲಾಗಿದೆ. ಅಂದು ಪ್ರಜಾಪ್ರಭುತ್ವದ ಭಾಗವಾಗಿರುವ ಎಲ್ಲ ಜನರೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿಂಬಿಸುವುದಕ್ಕೆ ಪೂರಕವಾಗಿ ಚಟುವಟಿಕೆಗಳು ಹಾಗೂ ಮಾನವ ಸರಪಳಿಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದರು.ಈ ಮಾನವ ಸರಪಳಿಯ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು 100 ಮೀಟರ್‌ಗೆ ಒಬ್ಬ ಮೇಲ್ವಿಚಾರಕರನ್ನು, 1 ಕಿ.ಮೀಗೆ ಒಬ್ಬ ಜಿಲ್ಲಾ ನೂಡಲ್ ಅಧಿಕಾರಿಯನ್ನಾಗಿ ಮತ್ತು 5 ಕಿ.ಮೀಗೆ ಒಬ್ಬ ಕಮಾಂಡರ್ಗಳನ್ನು ನೇಮಿಸಲಾಗಿದೆ. ಒಟ್ಟಾರೆ ನಾನು ನೀನು ಎಂಬ ಭೇದ ಭಾವವಿಲ್ಲದೆ ನಾವೆಲ್ಲರೂ ಮಾನವ ಸರಪಳಿಯಲ್ಲಿ ಪಾಲ್ಗೊಳ್ಳೋಣ. ಈ ಪ್ರಜಾಪ್ರಭುತ್ವ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಜಿಲ್ಲೆಯಲ್ಲಿ ಆಲಮಟ್ಟಿಯಿಂದ ಸೀತಿಮನಿ, ಸಂಗಮಕ್ರಾಸ್, ಬಾಗಲಕೋಟೆ, ಲೋಕಾಪುರ ಮುಖಾಂತರ ಬೆಳಗಾವಿಯ ಸಾಲಹಳ್ಳಿಯ ವರೆಗೆ ಮಾನವ ಸರಪಳಿಯನ್ನು ನಿರ್ಮಿಸಿ ನಾವೆಲ್ಲರೂ ಒಂದೇ ಎಂದು ಜಗತ್ತಿಗೆ ತಿಳಿಸಬೇಕಾಗಿದೆ. ಕಾರಣ ನಿಗದಿಪಡಿಸಿದ ರೂಟ್ ಮ್ಯಾಪ್ ಮಾನವ ಸರಪಳಿಯಲ್ಲಿ ಎಲ್ಲಾ ಸರಕಾರಿ ಅಧಿಕಾರಿಗಳು, ಸಿಬ್ಬಂದಿ, ಶಾಲಾ-ಕಾಲೇಜುಗಳ ಎಲ್ಲ ಶಿಕ್ಷಕರು, ಪರಿಶಿಷ್ಟ ಜಾತಿ, ಪಂಗಡ ವರ್ಗ ಸಂಸ್ಥೆಗಳ ಮುಖಂಡರು, ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ತಮಗೆ ಸಮೀಪವಾಗುವ ಸ್ಥಳದಲ್ಲಿ ಸ್ವ-ಇಚ್ಚೆಯಿಂದ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ, ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ, ಉಪಾದ್ಯಕ್ಷೆ ಶೋಭಾ ರಾವ್, ಜಿ.ಪಂ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿ.ಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ ಸೇರಿದಂತೆ ಇತರರು ಉಪಸ್ಥಿತರಿದ್ದರು.