ಕನ್ನಡಪ್ರಭ ವಾರ್ತೆ ಖಾನಾಪುರ
ಪಟ್ಟಣದಲ್ಲಿ ಬುಧವಾರ ಪಕ್ಷದ ವತಿಯಿಂದ ಆಯೋಜಿಸಿದ್ದ ಪಕ್ಷದ ತಾಲೂಕು ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸಂದರ್ಭದಲ್ಲಿ ದೇಶಾದ್ಯಂತ ಪಕ್ಷದ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಯುವಂತೆ ನಿರ್ಧರಿಸಲಾಗಿತ್ತು. ಅದರಂತೆ ಪಕ್ಷದ ಬ್ಲಾಕ್ ಮಟ್ಟದ ಸಂಘಟನೆ ರಚನೆ ಅಭಿಯಾನವನ್ನು ಆಯೋಜಿಸಿ ಅಭಿಯಾನದಲ್ಲಿ ಪಕ್ಷದ ಪ್ರಾಮಾಣಿಕ, ನಿಷ್ಠಾವಂತ ಮತ್ತು ಪಕ್ಷನಿಷ್ಠ ಕಾರ್ಯಕರ್ತರಿಂದ ಸಲಹೆ, ಸೂಚನೆ ಸ್ವೀಕರಿಸುವ ಕೆಲಸ ಎಲ್ಲೆಡೆ ನಡೆದಿದೆ. ಪಕ್ಷ ತಳಮಟ್ಟದ ಕಾರ್ಯಕರ್ತರಿಗೆ ನಾಯಕತ್ವದ ಅವಕಾಶಗಳನ್ನು ಒದಗಿಸಲು ಬದ್ಧವಾಗಿದೆ. ಪ್ರಸ್ತುತ ಬೆಳಗಾವಿ ನಗರ ಮತ್ತು ಗ್ರಾಮೀಣ ಜಿಲ್ಲಾ ಅಧ್ಯಕ್ಷರ ಆಯ್ಕೆಗೆ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಕೆಲಸಕ್ಕೆ ವೀಕ್ಷಕರನ್ನು ನೇಮಕಗೊಳಿಸಿದೆ. ಪಕ್ಷದ ಆದೇಶದಂತೆ ತಾವು ಖಾನಾಪುರ ಕ್ಷೇತ್ರಕ್ಕೆ ಆಗಮಿಸಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಇದನ್ನು ಪಕ್ಷದ ವರಿಷ್ಠರಿಗೆ ತಲುಪಿಸಲಾಗುತ್ತದೆ ಎಂದು ವಿವರಿಸಿದರು.ಎಐಸಿಸಿ ಕಾರ್ಯದರ್ಶಿ ಮತ್ತು ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳಕರ, ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಕಾರ್ಯಕರ್ತರನ್ನು ಪಕ್ಷ ಎಂದಿಗೂ ಕೈಬಿಡುವುದಿಲ್ಲ. ಈಗ ಪಕ್ಷದ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪ್ರಜಾಸತ್ತಾತ್ಮಕವಾಗಿ ನಡೆಸುತ್ತಿರುವ ಕಾರಣ ತಳಮಟ್ಟದಿಂದ ಮುಂದೆ ಬಂದ ಕಾರ್ಯಕರ್ತರಿಗೆ ಉತ್ತಮ ಅವಕಾಶ ಸಿಗಲಿದೆ ಎಂದರು.ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಬ್ಲಾಕ್ ಅಧ್ಯಕ್ಷ ಮಹಾಂತೇಶ ರಾಹೂತ, ಮುಖಂಡರಾದ ಸುರೇಶ ಜಾಧವ, ಮಹಾದೇವ ಕೋಳಿ, ಈಶ್ವರ ಘಾಡಿ ಮತ್ತಿತರರು ಉಪಸ್ಥಿತರಿದ್ದರು.ಅಮಾನತುಗೊಂಡ ಇರ್ಫಾನ್‌ರನ್ನು ಸಭೆಯಿಂದ ಹೊರಹಾಕಿದ ವೀಕ್ಷಕರು
ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಇರ್ಫಾನ್ ತಾಳಿಕೋಟಿ ಅವರನ್ನು ಪಕ್ಷದ ವೀಕ್ಷಕರು ಸಭೆಯಿಂದ ಹೊರನಡೆಯುವಂತೆ ಸೂಚಿಸಿದ ಘಟನೆ ನಡೆಯಿತು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಇರ್ಫಾನ್ ಅವರ ಪಕ್ಷ ವಿರೋಧಿ ಚಟುವಟಿಕೆಯನ್ನು ಉಲ್ಲೇಖಿಸಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಅಮಾನತುಗೊಳಿಸಲಾಗಿತ್ತು. ಪಕ್ಷದಿಂದ ಅಮಾನತುಗೊಂಡಿದ್ದ ಅವರು ಬುಧವಾರದ ಸಭೆಯಲ್ಲಿ ಹಾಜರಿರುವ ಸಂಗತಿ ಗಮನಕ್ಕೆ ಬಂದ ಕೂಡಲೇ ಪಕ್ಷದ ವೀಕ್ಷಕ ಮನೋಜ ಚವಾಣ, ಇದು ಪಕ್ಷಕ್ಕೆ ನಿಷ್ಠರಾಗಿರುವ ಕಾರ್ಯಕರ್ತರ ಸಭೆಯಾಗಿದ್ದು, ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅಮಾನತುಗೊಂಡ ವ್ಯಕ್ತಿ ಸಭೆಯಲ್ಲಿ ಭಾಗವಹಿಸಲು ಅವಕಾಶ ಇಲ್ಲ ಎಂದು ಹೇಳಿ ಇರ್ಫಾನ್ ಅವರನ್ನು ಸಭೆಯಿಂದ ಹೊರ ನಡೆಯಲು ಸೂಚಿಸಿದರು. ಇದಕ್ಕೆ ಇರ್ಫಾನ್ ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದಾಗ ಸ್ವಲ್ಪ ಸಮಯದವರೆಗೆ ಸಭಾಂಗಣದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಇರ್ಫಾನ್ ಸಭೆಯಿಂದ ಹೊರನಡೆದ ಬಳಿಕ ಪಕ್ಷದ ಹಿರಿಯ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ನಂತರ ಸಭೆಯನ್ನು ಮುಂದುವರೆಸಲಾಯಿತು.