ಕನಕಗಿರಿ: ಪ್ರಪಂಚದ 80ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಇಂತಹದ್ದೆ ವ್ಯವಸ್ಥೆ ಜಗತ್ತಿನಾದ್ಯಂತ ವ್ಯಾಪಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನ ಆಚರಿಸುತ್ತಿದೆ ಎಂದು ತಹಸೀಲ್ದಾರ್ ಚಂದ್ರಶೇಖರ ಗಾಳಿ ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ಡಾ. ಅರವಿಂದ್ ಲಂಬೂ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂಸದೀಯ ಜ್ಞಾನ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ನಡೆಸಲು ಮುಂದಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದಾರೆ. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಪ್ರೌಢ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ಎಂದು ವಿಂಗಡಿಸಿ ಯುವ ಸಂಸತ್ತಿಗೆ ಆಯ್ಕೆ ಮಾಡಿಕೊಂಡು ಅಣುಕು ಸಂಸತ್ತು ನಡೆಸಿ, ಇದರಲ್ಲಿ ಆಯ್ಕೆಯಾದವರನ್ನು ತಾಲೂಕು ಮಟ್ಟಕ್ಕೆ, ಅಲ್ಲಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡುವುದಾಗಿರುತ್ತದೆ ಎಂದು ತಿಳಿಸಿದರು.
ಈ ವೇಳೆ ತಾಪಂ ಇಒ ರಾಜಶೇಖರ, ಕಾಲೇಜಿನ ಪ್ರಾಂಶುಪಾಲ ಅಮರೇಶ ದೇವರಾಳ, ಸಿಡಿಪಿಒ ವಿಜಯಲಕ್ಷ್ಮೀ ಹಿರೇಮಠ, ವಸತಿ ನಿಲಯಗಳ ಮೇಲ್ವಿಚಾರಕರಾದ ಪಂಪನಗೌಡ, ಹುಸೇನಬಿ ಯಲಬುರ್ಗಾ ಇದ್ದರು.