ಕನ್ನಡಪ್ರಭ ವಾರ್ತೆ ರಾವಂದೂರು
ಪಿರಿಯಾಪಟ್ಟಣ ತಾಲೂಕು ಬಸಲಾಪುರ ರೈತರು ಕೃಷಿಯಲ್ಲಿನ ಉತ್ಪಾದನೆ ಮತ್ತು ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಮಣ್ಣಿನ ಪರೀಕ್ಷೆ ಅತ್ಯಗತ್ಯ, ಹಾಗಾಗಿ ಕೂಡಲೇ ಮಣ್ಣಿನ ತಪಾಸಣೆ ಮಾಡಿಸುವಂತೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಸಾದ್ ಮನವಿ ಮಾಡಿದರು.ತಾಲೂಕಿನ ಬಸಲಾಪುರ ಗ್ರಾಮದಲ್ಲಿ ರೈತ ಜವರೇಗೌಡ ಅವರಿಗೆ ಸೇರಿದ ಜಮೀನಿನಲ್ಲಿ ಆಯೋಜಿಸಿದ್ದ ಮಣ್ಣಿನ ಮಾದರಿ ಸಂಗ್ರಹಣೆ ಕುರಿತ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತ ಅನ್ನ ನೀಡುವ ಭೂಮಿಗೆ ಅಗತ್ಯ ಪೋಷಕಾಂಶಗಳನ್ನು ನೀಡುವ ಬದಲಾಗಿ ಅಧಿಕ ಉತ್ಪಾದನೆಯ ನೆಪದಲ್ಲಿ ಹೆಚ್ಚೆಚ್ಚು ರಾಸಾಯನಿಕಗಳನ್ನು ಬಳಸುತ್ತಿರುವ ಪರಿಣಾಮ ಭೂಮಿಯ ಫಲವತ್ತತೆ ನಾಶವಾಗಿ ಆಹಾರ ಪದಾರ್ಥಗಳು ವಿಷಯುಕ್ತ ವಾಗುತ್ತಿದೆ. ಹಿಂದೆ ರೈತರು ಬೆಳೆಗಳಿಗೆ ತಾವೇ ಗೊಬ್ಬರವನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು, ಹಾಗಾಗಿ ಮಣ್ಣಿನ ಫಲವತ್ತತೆ ಗುಣಮಟ್ಟದಿಂದ ಕೂಡಿ ಉತ್ತಮ ಬೆಳೆ ಮತ್ತು ಆರೋಗ್ಯ ಸಿಗುತ್ತಿತ್ತು ಎಂದರು.ಆದರೆ ಇತ್ತೀಚೆಗೆ ಮಣ್ಣನ್ನು ಪರೀಕ್ಷೆಗೆ ಒಳಪಡಿಸದೇ ಬೆಳೆಯನ್ನು ಕೈಗೊಳ್ಳುತ್ತಾ, ಅಗತ್ಯಕ್ಕಿಂತೆ ಹೆಚ್ಚಿನ ರಾಸಾಯನಿಕ ಗೊಬ್ಬರಗಳನ್ನು ಹಾಕುತ್ತಿರುವ ಕಾರಣ ಮಣ್ಣಿನ ಸಾರ ಕಡಿಮೆಯಾಗುತ್ತಿದೆ, ಅಲ್ಲದೆ ಕೆಲವು ರೈತರು ಕಷಿ ಇಲಾಖೆಯ ಸವಲತ್ತುಗಳನ್ನು ಪಡೆಯುವ ಸಲುವಾಗಿ ಮಣ್ಣನ್ನು ಅವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸುತ್ತಿರುವುದು ಮತ್ತೊಂದು ಸಮಸ್ಯೆಗೆ ಎಡೆಮಾಡಿಕೊಟ್ಟಂತಾಗಿದೆ.
ಹೀಗೆ ಇದು ಮುಂದುವರಿದರೆ ಮಣ್ಣಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ರೈತರು ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಲು ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಬೇಕು ಎಂದು ಅವರು ತಿಳಿಸಿದರು.ಕೃಷಿ ಇಲಾಖೆ ವತಿಯಿಂದ ರೈತರಿಗೆ ಉತ್ತಮ ಗುಣಮಟ್ಟದ ಬೀಜ ಹಾಗೂ ಲಘು ಪೋಷಕಾಂಶಗಳನ್ನು ನೀಡುವುದು, ಕೃಷಿ ಪರಿಕರಗಳನ್ನು ಗ್ರಾಮ ಮಟ್ಟದಲ್ಲಿ ಸಕಾಲದಲ್ಲಿ ದೊರೆಯುವಂತೆ ಮಾಡಲು ಇಲಾಖೆ ಸಿದ್ದವಾಗಿದೆ. ಈಗಾಗಲೇ ತಾಲೂಕು ಮಟ್ಟದಲ್ಲಿ ಬೀಜೋತ್ಪಾದನೆಗೆ ಉತ್ತೇಜನ, ಆಧುನಿಕ ಮಾಹಿತಿ ತಂತ್ರಜ್ಞಾನಗಳ ಬಳಕೆ ಕುರಿತು ರೈತರ ರೈತರಲ್ಲಿ ಅರಿವು ಮೂಡಿಸಲಾಗಿದ್ದು, ಮಣ್ಣು ಮಾದರಿ ಸಂಗ್ರಹಣೆ, ಮಣ್ಣಿನ ಫಲವತ್ತತೆ, ಸಮಗ್ರ ಪೋಷಕಾಂಶ ನಿರ್ವಹಣೆ, ಸಮಗ್ರ ಕೃಷಿ ಪದ್ಧತಿ, ಬೀಜೋಪಚಾರ ಹಾಗೂ ಬೆಳೆಯ ವಿವಿಧ ಹಂತಗಳಲ್ಲಿ ಕೈಗೊಳ್ಳಬಹುದಾದ ಬೆಳೆ ನಿರ್ವಹಣೆ ತಾಂತ್ರಿಕತೆಯನ್ನು ಮಾಹಿತಿ ನೀಡಲಾಗುತ್ತಿದೆ ಎಂದರು.
ಕೃಷಿ ಅಧಿಕಾರಿಗಳಾದ ಮಹೇಶ್, ಹಿತೇಶ್, ಆತ್ಮ ಯೋಜನೆಯ ಸಿಬ್ಬಂದಿಗಳಾದ ವಿದ್ಯಾ, ಸುಷ್ಮಿತಾ, ಚಂದ್ರಕಲಾ, ರೈತ ಜವರೇಗೌಡ ಇದ್ದರು.