ನಾಳೆ ಎಲ್ಲ ಶಾಲೆ-ಕಾಲೇಜುಗಳಲ್ಲಿ ಡೆಂಘೀ ಜಾಗೃತಿ

KannadaprabhaNewsNetwork |  
Published : Jun 17, 2024, 01:41 AM IST
16ಡಿಡಬ್ಲೂಡಿ6ಡೆಂಘೀ ನಿಯಂತ್ರಣ ಹಿನ್ನೆಲೆಯಲ್ಲಿ ಡಿಎಚ್ಓ ಡಾ.ಶಶಿ ಪಾಟೀಲ ಅವರು ಭಾನುವಾರ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ರೋಗದ ಕುರಿತು ಜಾಗೃತಿ ಮೂಡಿಸಿದರು.  | Kannada Prabha

ಸಾರಾಂಶ

ಧಾರವಾಡ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಜೂ. 18ರಂದು ಏಕಕಾಲಕ್ಕೆ ಡೆಂಘೀ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕುರಿತು ಪೂರ್ವಭಾವಿ ಸಭೆ ನಡೆಸಲಾಗಿದೆ. ಭಿತ್ತಿಪತ್ರ ಹಾಗೂ ವೀಡಿಯೊಗಳನ್ನು ಮಕ್ಕಳಿಗೆ ತೋರಿಸಲು ತಿಳಿಸಲಾಯಿತು.

ಧಾರವಾಡ: ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಜೂ. 18ರಂದು ಏಕಕಾಲಕ್ಕೆ ಡೆಂಘೀ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲು ಜಿಲ್ಲಾಧಿಕಾರಿಗಳು ನೀಡಿದ ನಿರ್ದೇಶನದಂತೆ ಆರೋಗ್ಯ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ, ಜಿಲ್ಲಾ ನಗರಾಭಿವೃದ್ಧಿಕೋಶ, ಪಿಯು ಮತ್ತು ಪದವಿ ಕಾಲೇಜು ವಿಭಾಗದ ಅಧಿಕಾರಿಗಳು ಪೂರ್ವ ಸಿದ್ಧತಾ ಸಭೆ ಜರುಗಿಸಿದರು.

ಝೂಮ್ ವಿಸಿ ಮುಖಾಂತರ ಶಾಲಾ-ಕಾಲೇಜುಗಳ ಮುಖ್ಯಸ್ಥರೊಂದಿಗೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಏಕಕಾಲಕ್ಕೆ ಡೆಂಘೀ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಝೂಮ್ ವಿಸಿ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ವಿಜ್ಞಾನ ಶಿಕ್ಷಕರಿಗೆ ಡೆಂಘೀ ನಿಯಂತ್ರಣ ಕ್ರಮಗಳ ಕುರಿತು ವಿವರಿಸಲಾಯಿತು. ಭಿತ್ತಿಪತ್ರ ಹಾಗೂ ವೀಡಿಯೊಗಳನ್ನು ಮಕ್ಕಳಿಗೆ ತೋರಿಸಲು ತಿಳಿಸಲಾಯಿತು.

ಬಹುತೇಕ ಈ ರೋಗ ಮಕ್ಕಳಿಗೆ ಬರುತ್ತಿದೆ. ಆದ್ದರಿಂದ ರೋಗದಿಂದ ಅವರನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಇದರ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಲು ಹಾಗೂ ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣಕ್ಕೆ ಸಹಕರಿಸಲು ಆರೋಗ್ಯಾಧಿಗಾರಿ ಡಾ. ಶಶಿ ಪಾಟೀಲ್ ಎಲ್ಲ ಇಲಾಖೆಗಳ ಸಹಕಾರ ಕೋರಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಬಿ. ಮಾತನಾಡಿ, ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಿಳಿಸಿದರು. ಜಿಪಂ ಉಪ ಕಾರ್ಯದರ್ಶಿ ಬಿ.ಎಸ್. ಮುಗನೂರಮಠ ಮಾತನಾಡಿ, ಪಂಚಾಯಿತಿ ಅಧಿಕಾರಿಗಳು ಗ್ರಾಮ ಪಂಚಾಯಿತಿವಾರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಎಲ್ಲ ಶಾಲೆಗಳಲ್ಲಿ ಡೆಂಘೀ ನಿಯಂತ್ರಣ ಕುರಿತು ಅರಿವು ಮೂಡಿಸಬೇಕು ಎಂದರು.

ಡಿಡಿಪಿಐ ಎಸ್.ಎಸ್. ಕೆಳದಿಮಠ ಮಾತನಾಡಿ, ಆರೋಗ್ಯ ಇಲಾಖೆ ನೀಡಿದ ಮಾಹಿತಿಯನ್ನು, ಮಕ್ಕಳಿಗೆ ತಿಳಿಸಿ ಮಕ್ಕಳಲ್ಲಿ ಅರಿವು ಮೂಡಿಸಿ, ರೋಗ ನಿಯಂತ್ರಣಕ್ಕೆ ಸಹಕರಿಸಲು ಮತ್ತು ನಿಯಂತ್ರಣ ಕ್ರಮವನ್ನು ತಮ್ಮ ಮನೆಗಳಲ್ಲಿಯೂ ಅಳವಡಿಸಿಕೂಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಲು ಸೂಚಿಸಿದರು.

ಡಾ. ಸುಜಾತಾ ವಿ. ಹಸವೀಮಠ ಡೆಂಘೀ ಗುಣಲಕ್ಷಣಗಳು, ಚಿಕಿತ್ಸೆಯ ಮುಂಜಾಗ್ರತಾ ಕ್ರಮಗಳ ಕುರಿತು ವಿಷಯ ಮಂಡಿಸಿದರು. ಶಿಕ್ಷಣ ಇಲಾಖೆ ಅಧಿಕಾರಿ ಎಸ್‌.ಎಂ. ಹುಡೇದಮನಿ ಹಾಗೂ ಸಿಬ್ಬಂದಿ ಇದ್ದರು.

ಡಿಎಚ್‌ಒ ಅವರಿಂದ ಕ್ಷೇತ್ರ ಭೇಟಿ: ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಶಿ ಪಾಟೀಲ ಅವರು ಭಾನುವಾರ ನಗರದ ಗುಲಗಂಜಿಕೊಪ್ಪ, ಗಾಂಧಿ ನಗರ, ರಾಜೀವಗಾಂಧಿ ನಗರ, ಸರಸ್ವತಿಪುರ ಹಾಗೂ ಹುಬ್ಬಳ್ಳಿ ನಗರದ ಹಳೇ ಹುಬ್ಬಳ್ಳಿ, ಎಸ್‌.ಎಂ. ಕೃಷ್ಣ ನಗರ, ಬುಲ್ಡೊಜಾರ ನಗರ, ಕಿತ್ತೂರ್ ಪ್ಲಾಟ್ ಮತ್ತು ಗಂಗಿವಾಳ, ರಾಯನಾಳ ಗ್ರಾಮಗಳಿಗೆ ಭೇಟಿ ನೀಡಿ ಡೆಂಘೀ ರೋಗದ ಬಗ್ಗೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಮತ್ತು ಮನೆಮನೆ ಸಮೀಕ್ಷಾ ಕಾರ್ಯವನ್ನು ಪರಿಶೀಲನೆ ಮಾಡಿದರು. ಇದೇ ಸಂದರ್ಭದಲ್ಲಿ ಮನೆಗಳಿಗೆ ತೆರಳಿ ಸಾರ್ವಜನಿಕರಿಗೆ ಆರೋಗ್ಯ ಸುರಕ್ಷತೆ, ರೋಗ ನಿಯಂತ್ರಣ ಕುರಿತು ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ