ಕನ್ನಡಪ್ರಭ ವಾರ್ತೆ ಕೋಲಾರ
ನಗರದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ‘ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ’ ಅಂಗವಾಗಿ ಜಾಗೃತಿ ಕರಪತ್ರ ಬಿಡುಗಡೆಗೊಳಿಸಿ, ತಾಲೂಕಿನ ಗ್ರಾಪಂ ಪಿಡಿಒಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಗ್ರಾಪಂಗಳಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಸರಬರಾಜು ನಿಲ್ಲಿಸಿ, ವಾಟರ್‌ಮೆನ್‌ಗಳ ಸಹಕಾರದೊಂದಿಗೆ ಮನೆಗಳಲ್ಲಿ ನೀರಿನ ಸಂಗ್ರಹ, ಸಾಧನಗಳ ಸ್ವಚ್ಛತೆ ಖಾತ್ರಿಪಡಿಸಿಕೊಂಡ ನಂತರ ನೀರು ಹರಿಸುವುದರಿಂದ ಸೊಳ್ಳೆಗಳ ಸಂತತಿಯನ್ನು ತಡೆಯಲು ಸಾಧ್ಯವಾಗಲಿದ್ದು, ಡೆಂಗ್ಯೂ ರೋಗವನ್ನು ನಿಯಂತ್ರಿಸಬಹುದಾಗಿದೆ ಎಂದರು.ಮನುಷ್ಯರಿಗೆ ಆರೋಗ್ಯ ಎಂಬುದು ಮುಖ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೋಗಗಳು ಪತ್ತೆಯಾಗುತ್ತಿವೆ. ಇದರಲ್ಲಿ ಡೆಂಗ್ಯೂ ಜ್ವರವು ಸಹ ಒಂದಾಗಿದ್ದು, ಇದರ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
ಡೆಂಗ್ಯು ನಿಯಂತ್ರಣಕ್ಕೆ ಸೊಳ್ಳೆ ನಾಶ ಮುಖ್ಯ:
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರವಿಕುಮಾರ್ ಮಾತನಾಡಿ, ಪ್ರತಿ ವರ್ಷವೂ ಒಂದು ಘೋಷಣೆಯೊಂದಿಗೆ ಈ ಡೆಂಗ್ಯೂ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ವರ್ಷದ ಘೋಷವಾಕ್ಯ ‘ಸಮುದಾಯದ ಸಹಭಾಗಿತ್ವದೊಂದಿಗೆ ಡೆಂಗ್ಯೂ ನಿಯಂತ್ರಣ’ ಎಂಬುದಾಗಿದ್ದು, ಈ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಇಲಾಖೆ ಮುಂದಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಪಂ ಕಾರ್ಯ ನಿರ್ವಹಣಾಧಿಕಾರಿ ಜೋಸೆಫ್ ಮಾತನಾಡಿದರು.
ತಾಲೂಕಿನ ಎಲ್ಲಾ ಗ್ರಾಪಂಗಳ ಪಿಡಿಒಗಳು ಹಾಜರಿದ್ದ ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸತ್ಯನಾರಾಯಣಗೌಡ, ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾದೇವಿ, ಬ್ಲಾಕ್ ಪ್ರೋಗ್ರಾಂ ಅಧಿಕಾರಿ ಮಂಜುನಾಥ್, ಆರೋಗ್ಯ ನಿರೀಕ್ಷಣಾಧಿಕಾರಿ ರಜನಿ ಇದ್ದರು.