ರೋಗದ ಮುನ್ನೆಚ್ಚರಿಕೆ । ಮಳೆಯಿಂದ ತ್ಯಾಜ್ಯದಲ್ಲಿ ನೀರು ಸಂಗ್ರಹ । ಮೊಟ್ಟೆಯಿಟ್ಟು ಕಾಯಿಲೆಗೆ ಕಾರಣವಾಗುತ್ತಿರುವ ಸೊಳ್ಳೆಗಳು
ಕನ್ನಡಪ್ರಭ ವಾರ್ತೆ ಆಲೂರುತಾಲೂಕಿನಾದ್ಯಂತ ಡೆಂಘೀ ಪ್ರಕರಣಗಳು ಪ್ರತಿದಿನ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಮುತುವರ್ಜಿ ವಹಿಸಿ ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಮೂಲಕ ಡೆಂಘೀ ರೋಗ ಹರಡದಂತೆ ತಡೆಯಬೇಕಾಗಿದೆ ಎಂದು ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯು ಸೂಚನೆ ನೀಡಿದೆ.
ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನಾದ್ಯಂತ ಪ್ರತಿದಿನ ಮಳೆಯಾಗುತ್ತಿದ್ದು, ಹಳೆಯ ಟೈಯರ್‌ಗಳು, ತೆಂಗಿನಕಾಯಿ ಚಿಪ್ಪು, ಪ್ಲಾಸ್ಟಿಕ್ ಬಾಟಲಿಗಳು ಸೇರಿದಂತೆ ಮನೆಯ ಸುತ್ತಮುತ್ತಲಿನ ತ್ಯಾಜ್ಯ ವಸ್ತುಗಳಲ್ಲಿ ನೀರು ಶೇಖರಣೆಗೊಂಡು ಇವುಗಳಲ್ಲಿ ಡೆಂಘೀ ರೋಗವನ್ನು ಹರಡುವ ಈಡಿಸ್ ಸೊಳ್ಳೆ ಮೊಟ್ಟೆ ಇಟ್ಟು ಇವುಗಳ ಲಾರ್ವದಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಈ ರೋಗ ಹರಡುವ ಕಾರಣ, ಸಾರ್ವಜನಿಕರು ತಮ್ಮ ಮನೆಯ ಪರಿಸರದಲ್ಲಿ ಇಂತಹ ತ್ಯಾಜ್ಯ ವಸ್ತುಗಳು ಇರದಂತೆ ನೋಡಿಕೊಳ್ಳಬೇಕು.ಮನೆಯ ಒಳಗೂ ಸಹ ಮೂರು ದಿನಗಳಿಗೊಮ್ಮೆ ಸಂಗ್ರಹಿಸಿದ ನೀರನ್ನು ಖಾಲಿ ಮಾಡಿ ಹೊಸ ನೀರನ್ನು ತುಂಬಿಸಬೇಕು. ಮನೆಯ ಅಕ್ಕಪಕ್ಕದ ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕಾಗಿದೆ. ಡೆಂಘೀ ಕಾಯಿಲೆ ವರ್ಷಪೂರ್ತಿ ಕಾಣಿಸಿಕೊಂಡರೂ ಸಹ ಮಾನ್ಸೂನ್ ಸಮಯದಲ್ಲಿ ಅಂದರೆ ಏಪ್ರಿಲ್ ನಿಂದ ಅಕ್ಟೋಬರ್ ವರೆಗೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರು ತಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಮಳೆಯ ನೀರು ಸಂಗ್ರಹವಾಗದಂತೆ ಕ್ರಮ ಕೈಗೊಳ್ಳಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ.
ಈ ಸಂಬಂಧವಾಗಿ ಪತ್ರಿಕೆಯೊಂದಿಗೆ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ನಿಸಾರ್ ಫಾತಿಮಾ, ಡೆಂಘೀ ರೋಗ ಹರಡುವ ಸೊಳ್ಳೆಗಳು ಉತ್ಪತ್ತಿಯಾಗದಂತೆ ತಡೆಯುವುದು ಮೊದಲ ಆದ್ಯತೆಯಾಗಿದೆ. ಪರಿಸರ ಸ್ವಚ್ಛತೆಯನ್ನು ಕಾಪಾಡಿಕೊಂಡು ಸೊಳ್ಳೆಯ ಸಂತಾನಾಭಿವೃದ್ಧಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಲು ಈಗಾಗಲೇ ಪ್ರತಿ ಮನೆಯಲ್ಲಿ ಸರ್ವೆ ನಡೆಸಲಾಗುತ್ತಿದ್ದು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಭೆ ನಡೆಸಲಾಗುವುದು. ನೀರು ಸಂಗ್ರಹವಾಗುವ ಚರಂಡಿ ಮುಂತಾದ ಜಾಗಗಳಲ್ಲಿ ಸೆಮಿ ಪಾಸ್ ದ್ರಾವಣವನ್ನು ಸಿಂಪಡಣೆ ಮಾಡಲಾಗುತ್ತಿದೆ. ಇದನ್ನು ಸಿಂಪಡಿಸಿದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ಸೊಳ್ಳೆಗಳು ನಾಶವಾಗುತ್ತವೆ. ಮಲಗುವಾಗ ಸೊಳ್ಳೆ ಪರದೆ ಬಳಸಬೇಕು, ಹಗಲಿನಲ್ಲಿ ಮೈತುಂಬ ಬಟ್ಟೆ ಧರಿಸಬೇಕು, ರೋಗ ಲಕ್ಷಣಗಳೇನಾದರೂ ಕಂಡು ಬಂದಲ್ಲಿ ಸಮೀಪದ ಆಸ್ಪತ್ರೆಯಲ್ಲಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.ಪತ್ರಿಕೆಯೊಂದಿಗೆ ಮಾತನಾಡಿದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಾಂತಕೃಷ್ಣ, ಪಂಚಾಯಿತಿಯ ವಾರ್ಡ್‌ಗಳ ವಿಂಗಡಣೆ ಅವೈಜ್ಞಾನಿಕವಾಗಿದ್ದು ಪಟ್ಟಣದ ಹೃದಯ ಭಾಗದಲ್ಲಿರುವ ರಾಜಪ್ಪ ಬಡಾವಣೆ, ಪಟ್ಟಣ ಪಂಚಾಯಿತಿ ಕಚೇರಿಯ ಪಕ್ಕದಲ್ಲಿ ಇದ್ದರೂ ಸಹ, ಅದು ಬೈರಾಪುರ ಪಂಚಾಯತಿಗೆ ಸೇರಿದೆ. ಕಸ ವಿಲೇವಾರಿ ವಾಹನಗಳು ಗ್ರಾಮ ಪಂಚಾಯಿತಿಗೆ ಸೇರಿದ ಪ್ರದೇಶಗಳಿಗೆ ಹೋಗದ ಕಾರಣ ಹಾಗೂ ಗ್ರಾಮ ಪಂಚಾಯಿತಿಯವರು ಕಸ ವಿಲೇವಾರಿಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ನಾಗರಿಕರು ವಿಧಿ ಇಲ್ಲದೆ ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಬಗೆಹರಿಸಬೇಕಿದೆ ಎಂದು ತಿಳಿಸಿದರು.