ಕನ್ನಡಪ್ರಭ ವಾರ್ತೆ ಮಳವಳ್ಳಿಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಯುವತಿಗೆ ಬೆದರಿಕೆ ಹಾಕಿರುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಮಹಿಳೆಯರ ಬಗ್ಗೆ, ಕೀಳಾಗಿ ಮತ್ತು ಅವಹೇಳನಕಾರಿಯಾಗಿ ಮಾತನಾಡುವುದು ಆರ್‌ಎಸ್‌ಎಸ್‌ನ ಮನಸ್ಥಿತಿಯಾಗಿದೆ. ಈ ರೀತಿಯ ಅವಹೇಳನಕಾರಿ ಹೇಳಿಕೆ ನೀಡಿ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು.
ಮುಸ್ಕಾನ್ ಎಂಬ ಯುವತಿಯನ್ನು ಆಲ್ ಖೈದ ಸಂಘಟನೆ ಜೊತೆ ಸಂಬಂಧ ಕಲ್ಪಿಸಿ ಅವಹೇಳನ ಮಾಡಿರುವುದು ಹಾಗೂ ಕಾಲೇಜಿಗೆ ಹೋಗದ ಹಾಗೇ ತಡೆಯುತ್ತೇವೆ ಎಂದು ಬೆದರಿಕೆ ಹಾಕಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆಸಿದಾಗ, ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದವರನ್ನು ರಕ್ಷಿಸದ ಮೋದಿ ಸರ್ಕಾರ ಮರ್ಯಾದೆ ಪುರುಷೋತ್ತಮ ಶ್ರೀರಾಮ ದೇವಸ್ಥಾನ ಉದ್ಘಾಟಿಸಲು ಹೊರಟಿದೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಡಿ.ಕೆ ಲತಾ, ಜಿಲ್ಲಾ ಕಾರ್ಯದರ್ಶಿ ಸುಶೀಲ, ಜಿಲ್ಲಾ ಉಪಾಧ್ಯಕ್ಷೆ ಶೋಭ, ಜಿಲ್ಲಾ ಕಾರ್ಯದರ್ಶಿ ಮಂಜುಳ, ಜಿಲ್ಲಾ ಸಮಿತಿ ಸದಸ್ಯೆ ಜಯಶೀಲ ಸೇರಿದಂತೆ ಇತರರು ಇದ್ದರು.