ಕಾಂಗ್ರೆಸ್‌ 5ನೇ ಗ್ಯಾರಂಟಿ ಯುವನಿಧಿಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ

KannadaprabhaNewsNetwork |  
Published : Dec 26, 2023, 01:31 AM ISTUpdated : Dec 26, 2023, 01:32 AM IST
ಯುವನಿಧಿ | Kannada Prabha

ಸಾರಾಂಶ

ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮಹತ್ವದ ಐದನೇ ಗ್ಯಾರಂಟಿ ಯುವನಿಧಿಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ನೀಡುವ ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ‘ಯುವನಿಧಿ’ ಯೋಜನೆಗೆ ಡಿ.26ರ ಮಂಗಳವಾರದಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬೆಳಗ್ಗೆ 11 ಗಂಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ.

ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌, ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ಯುವನಿಧಿ ಯೋಜನೆಯ ಪೋಸ್ಟರ್‌ ಅನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಲೋಗೋವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅನಾವರಣಗೊಳಿಸಲಿದ್ದಾರೆ. ಸ್ಪೀಕರ್‌ ಯು.ಟಿ.ಖಾದರ್‌, ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳುವರು.

ಇಂದಿನಿಂದಲೇ ನೋಂದಣಿ ಶುರು:

ಯೋಜನೆಗೆ ಮುಖ್ಯಮಂತ್ರಿ ಅವರು ಚಾಲನೆ ನೀಡಿದ ಬಳಿಕ 2023-24ನೇ ಸಾಲಿನಲ್ಲಿ ಪದವಿ/ಡಿಪ್ಲೊಮಾ ಪಾಸಾಗಿಯೂ ಉದ್ಯೋಗ ದೊರೆಯದವರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಬಹುದು. ಜತೆಗೆ, ಗ್ರಾಮ ಒನ್‌, ಕರ್ನಾಟಕ ಒನ್‌, ಬೆಂಗಳೂರು ಒನ್‌ ಕೇಂದ್ರಗಳ ಮೂಲಕವೂ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಜನವರಿ 12ರ ಸ್ವಾಮಿ ವಿವೇಕಾನಂದರ ಜಯಂತಿಯಂದು ಅರ್ಹ ಪದವೀಧರರಿಗೆ ಮಾಸಿಕ 3000 ರು. ಹಾಗೂ ಡಿಪ್ಲೊಮಾ ತೇರ್ಗಡೆಯಾದವರಿಗೆ ಮಾಸಿಕ 1500 ರು. ನಿರುದ್ಯೋಗ ಭತ್ಯೆ ನೇರ ನಗದು ವರ್ಗಾವಣೆ(ಡಿಬಿಟಿ) ಮೂಲಕ ಜಮೆಯಾಗಲಿದೆ.

ಷರತ್ತುಗಳೇನು?:

ಪದವಿ/ ಡಿಪ್ಲೊಮಾ ವ್ಯಾಸಂಗದ ಅವಧಿಯಲ್ಲಿ ಕರ್ನಾಟಕದಲ್ಲಿ ಕನಿಷ್ಠ 6 ವರ್ಷದವರೆಗೆ ವಾಸವಾಗಿರಬೇಕು ಎಂಬ ಷರತ್ತನ್ನು ಅರ್ಜಿದಾರರಿಗೆ ವಿಧಿಸಲಾಗಿದೆ.

ಇದಲ್ಲದೆ, ಫಲಾನುಭವಿಗಳು ಪ್ರತಿ ತಿಂಗಳ 25ರೊಳಗೆ ಸ್ವಯಂಘೋಷಣೆ ಮೂಲಕ ನಿರುದ್ಯೋಗ ಭತ್ಯೆ ಪಡೆಯಬಹುದು. ಇದರ ನಡುವೆ ಸ್ವಂತ ಉದ್ಯೋಗ ಆರಂಭಿಸಿದರೆ, ಉದ್ಯೋಗ ಸಿಕ್ಕರೆ ಭತ್ಯೆ ಪಡೆಯುವಂತಿಲ್ಲ.

ಅನರ್ಹರು ಭತ್ಯೆ ಪಡೆದರೆ ಕ್ರಮ:

ಈ ಯೋಜನೆಯ 4.81 ಲಕ್ಷ ಪದವೀಧರರು, 48,153 ಡಿಪ್ಲೊಮಾ ತೇರ್ಗಡೆಯಾದವರು ಸೇರಿ ಒಟ್ಟು 5.29 ಲಕ್ಷ ಮಂದಿ ನೋಂದಣಿಯಾಗುವ ನಿರೀಕ್ಷೆ ಇದೆ. ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 250 ಕೋಟಿ ರು., ಮುಂದಿನ ಹಣಕಾಸು ವರ್ಷದಲ್ಲಿ 1250 ಕೋಟಿ ರು. ಅಂದಾಜು ವೆಚ್ಚದ ನಿರೀಕ್ಷೆ ಮಾಡಲಾಗಿದೆ. ಅನರ್ಹರು ಭತ್ಯೆ ಪಡೆದರೆ ಅಷ್ಟೂ ಮೊತ್ತ ವಾಪಾಸ್‌ ಪಡೆಯುವ ಜತೆಗೆ ಕಾನೂನು ಕ್ರಮವೂ ಆಗಲಿದೆ ಎಂದು ಸರ್ಕಾರ ಎಚ್ಚರಿಸಿದೆ.

ಯಾವೆಲ್ಲಾ ದಾಖಲೆ ಬೇಕು?:

ಪದವೀಧರರು ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ (ಪಿಡಿಸಿ), ಡಿಪ್ಲೊಮಾ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಡಿಪ್ಲೊಮಾ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ. ಕರ್ನಾಟಕ ವಾಸಿಯಾಗಿರುವ ಬಗ್ಗೆ ಸೂಕ್ತ ದಾಖಲೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ