ಯುವತಿ ವಿಚಾರವಾಗಿ ಯುವಕನನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದ ಪ್ರಕರಣದ ಸಂಬಂಧ ಆರು ಆರೋಪಿಗಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.ಮೊಹಮ್ಮದ್ ಶಾಹಿದ್(21), ಸೈಯಿದ್ ಅಲಿ (29), ಫರ್ವಿಜ್ ಪಾಷಾ(25), ಮೊಹಮ್ಮದ್ ಮೋಸಿನ್(27), ಮೊಹಮ್ಮದ್ ಅರ್ಫಾತ್ (27), ಅಫಾನ್ ಖಾನ್(26) ಬಂಧಿತ ಆರೋಪಿಗಳು
ಬೆಂಗಳೂರು : ಯುವತಿ ವಿಚಾರವಾಗಿ ಯುವಕನನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದ ಪ್ರಕರಣದ ಸಂಬಂಧ ಆರು ಆರೋಪಿಗಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಶಾಹಿದ್(21), ಸೈಯಿದ್ ಅಲಿ (29), ಫರ್ವಿಜ್ ಪಾಷಾ(25), ಮೊಹಮ್ಮದ್ ಮೋಸಿನ್(27), ಮೊಹಮ್ಮದ್ ಅರ್ಫಾತ್ (27), ಅಫಾನ್ ಖಾನ್(26) ಬಂಧಿತ ಆರೋಪಿಗಳು. ತಲೆಮರೆಸಿಕೊಂಡಿರುವ ಅಬ್ನಾನ್ ಹಾಗೂ ಅಫ್ರೀದಿಗಾಗಿ ಶೋಧ ನಡೆಸಲಾಗಿದೆ. ಹಲ್ಲೆಗೊಳಗಾದ ಯಲಹಂಕ ನಿವಾಸಿಯಾದ ಮೊಹಮ್ಮದ್ ರಫೀಕ್ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ವಿಮಾನ ನಿಲ್ದಾಣಕ್ಕೆ ಹೋಗಿದ್ದ ಕ್ಯಾಬ್ ಚಾಲಕ ಮತ್ತು ಆತನ ಸ್ನೇಹಿತನನ್ನು ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದ ಗ್ಯಾಂಗ್‌ವೊಂದು ಅಪಹರಿಸಿ, ಚಾಕು ಹಾಗೂ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದ್ದಲ್ಲದೆ ನಗದು ಹಾಗೂ ಮೊಬೈಲ್ ಸುಲಿಗೆ ಮಾಡಿದ್ದರು. ಆರೋಪಿಗಳಿಂದ ತಪ್ಪಿಸಿಕೊಂಡು ಬಂದ ಮೊಹಮ್ಮದ್ ರಫೀ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮಹಿಳೆಯೊಬ್ಬರ ವಿಚಾರಕ್ಕೆ ಸಂಬಂಧಿಸಿದ ಜಗಳವೇ ಈ ಕೃತ್ಯಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ:
ಮೊಹಮ್ಮದ್ ರಫೀಕ್ (30) ಮೂಲತಃ ಕೇರಳದವರಾಗಿದ್ದು, ಕಳೆದ 6 ತಿಂಗಳಿನಿಂದ ನಗರದಲ್ಲಿ ಬಾಡಿಗೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಮೇ 21ರ ತಡರಾತ್ರಿ 1ಗಂಟೆ ಸುಮಾರಿಗೆ ರಫೀಕ್ ತಮ್ಮ ಸ್ನೇಹಿತ ದೀಪಕ್‌ನನ್ನು ಪಿಕಪ್ ಮಾಡಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ದೀಪಕ್‌ನನ್ನು ಕರೆದುಕೊಂಡು ವಾಪಸ್ ಬರುತ್ತಿದ್ದಾಗ, ಬೇಗೂರು ಬಳಿ ಬಿಳಿ ಬಣ್ಣದ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದ 5-6 ಜನರ ಗ್ಯಾಂಗ್ ಇವರ ಕ್ಯಾಬ್ ಅನ್ನು ಅಡ್ಡಗಟ್ಟಿದೆ.
ಕಾರಿನಿಂದ ಇಳಿದ ದುಷ್ಕರ್ಮಿಗಳು ಚಾಕು ಮತ್ತು ಮಾರಕಾಸ್ತ್ರಗಳನ್ನು ತೋರಿಸಿ ರಫೀಕ್‌ನನ್ನು ಬಲವಂತವಾಗಿ ಬೆಂಜ್ ಕಾರಿಗೆ ಎಳೆದುಕೊಂಡಿದ್ದಾರೆ. ಅವರ ಬಳಿಯಿದ್ದ 21000 ರು. ನಗದು ಹಾಗೂ ಮೊಬೈಲ್ ಕಸಿದುಕೊಂಡು ನಗರದ ಕಡೆಗೆ ಚಲಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ರಫೀಕ್‌ನಿಂದ ಆತನ ಮತ್ತೊಬ್ಬ ಸ್ನೇಹಿತ ಜಾಬಿರ್ ಎಂಬುವವನಿಗೆ ಕರೆ ಮಾಡಿಸಿದ್ದಾರೆ. ತನಗೆ ಅಪಘಾತವಾಗಿದೆ ಎಂದು ಸುಳ್ಳು ಹೇಳಿಸಿ ಜಾಬಿರ್‌ನನ್ನು ಸ್ಥಳಕ್ಕೆ ಬರುವಂತೆ ಪ್ಲಾನ್ ಮಾಡಿದ್ದರು.ಸ್ನೇಹಿತ ಕರೆ ಮಾಡಿದ್ದಕ್ಕೆ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಜಾಬಿರ್ ಮೇಲೆಯೂ ಈ ಗ್ಯಾಂಗ್ ಕಬ್ಬಿಣದ ರಾಡ್‌ಗಳಿಂದ ಬೆದರಿಸಿ, ಇಬ್ಬರನ್ನೂ ಖಾಲಿ ಸೈಟ್‌ವೊಂದಕ್ಕೆ ಕರೆದೊಯ್ದು ಮನಬಂದಂತೆ ಥಳಿಸಿದೆ. ಈ ವೇಳೆ ರಫೀಕ್ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಆಟೋ ಮೂಲಕ ಮನೆಗೆ ಬಂದು ತಲುಪಿದ್ದಾರೆ. ನಂತರ ಮುಂಜಾನೆ 5 ಗಂಟೆ ಸುಮಾರಿಗೆ ಮತ್ತೊಬ್ಬ ಸ್ನೇಹಿತನ ಫೋನ್ ಬಳಸಿ ತುರ್ತು ಸಹಾಯವಾಣಿಯಾದ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಪೊಲೀಸರ ಕ್ಷಿಪ್ರ ಕಾರ್ಯಾಚರಣೆ:
ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಸಂಪಿಗೆಹಳ್ಳಿ ಹೊಯ್ಸಳ ಸಿಬ್ಬಂದಿ ಗಾಯಗೊಂಡಿದ್ದ ಜಾಬಿರ್‌ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಯಿಂದಾಗಿ ಜಾಬಿರ್ ಕಿವಿಗೆ ಬಲವಾದ ಗಾಯಗಳಾಗಿವೆ. ಸದ್ಯ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ಮಾಡಿದವರು ಮತ್ತು ದೂರುದಾರರಿಗೆ ಮುಂಚಿತವಾಗಿ ಪರಿಚಯ ಇರಲಿಲ್ಲ. ಆದರೆ ಮಹಿಳೆಯೊಬ್ಬರ ವಿಚಾರದಲ್ಲಿ ಇವರ ನಡುವೆ ಗಲಾಟೆಯಾಗಿದ್ದು, ಇದೇ ದ್ವೇಷದಲ್ಲಿ ಅಪಹರಣ ಮತ್ತು ದರೋಡೆ ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುವತಿಯ ಹೊಸ ಲವರ್‌ನಿಂದ ಅಪಹರಣ ಸಂಚು:
ಮೊಹಮ್ಮದ್ ರಫೀ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಆದರೆ ಕಳೆದ 1 ವರ್ಷದ ಹಿಂದೆ ಬ್ರೇಕಪ್ ಆಗಿತ್ತು. ಬಳಿಕ ಆ ಯುವತಿ ಅಬ್ನಾನ್ ಜತೆಗೆ ಸಂಪರ್ಕಕ್ಕೆ ಬಂದಿದ್ದಳು. ನಂತರ ಇಬ್ಬರು ಪ್ರೀತಿಸಿ ಮದುವೆ ಆಗಲು ಮುಂದಾಗಿದ್ದರು. ಆದರೆ ಮದುವೆಗೆ ಕೆಲವೇ ದಿನಗಳು ಬಾಕಿ ಇದ್ದಾಗ ತನ್ನ ಮಾಜಿ ಪ್ರೇಯಸಿಯಾದ ಯುವತಿಯನ್ನು ಮೊಹಮ್ಮದ್ ರಫೀ ಸಂಪರ್ಕ ಮಾಡಿದ್ದ ಎನ್ನಲಾಗಿದೆ. ಈ ವಿಚಾರದ ಸಂಬಂಧ ಮಾತನಾಡಲು ಹೋಗಿದ್ದಾಗ ರಫೀಕ್ ಅಬ್ನಾನ್ ಮೇಲೆ ಹಲ್ಲೆ ಮಾಡಿ ಅವಮಾನ ಮಾಡಿ ಕಳಿಸಿದ್ದ. ಇದರಿಂದ ಕೋಪಗೊಂಡಿದ್ದ ಆತ ಅಪಹರಣಕ್ಕೆ ಸಂಚು ರೂಪಿಸಿದ್ದ.

