ಪಟ್ಟಣದ ನವಾಯತ್ ಕಾಲನಿಯ ಹೆದ್ದಾರಿ ಬದಿಯಲ್ಲಿರುವ ಮುರಿನಕಟ್ಟೆಯ ವಿವಾದ ಭುಗಿಲೆದ್ದಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ಸೋಮವಾರ ಬೆಳಗ್ಗೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಆಗಮಿಸಿದ್ದು, ಘಟನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ಭಟ್ಕಳ : ಪಟ್ಟಣದ ನವಾಯತ್ ಕಾಲನಿಯ ಹೆದ್ದಾರಿ ಬದಿಯಲ್ಲಿರುವ ಮುರಿನಕಟ್ಟೆಯ ವಿವಾದ ಭುಗಿಲೆದ್ದಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ಸೋಮವಾರ ಬೆಳಗ್ಗೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಆಗಮಿಸಿದ್ದು, ಘಟನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ಮುರಿನಕಟ್ಟೆಗೆ ಹಾನಿ ಮಾಡಿದ ಪ್ರಕರಣ
ನವಾಯತ್ ಕಾಲನಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣ ಮಾಡಲಾದ ಮುರಿನಕಟ್ಟೆಗೆ ಹಾನಿ ಮಾಡಿದ ಪ್ರಕರಣ ಹಾಗೂ ಪೊಲೀಸರ ಮೇಲೆ ಗುಂಪು ಹಲ್ಲೆ ನಡೆಸಿರುವುದು ಹಾಗೂ ಹೆದ್ದಾರಿ ಮೇಲೆ ಅಡಚಣೆ ಮಾಡಿದ ಕುರಿತು ಮತ್ತು ಗುಂಪು ಸೇರಿದ ಬಗ್ಗೆ ನಾಲ್ಕು ಪ್ರಕರಣಗಳು ದಾಖಲಾಗಿದ್ದು ಒಟ್ಟೂ ೬ ಜನರನ್ನು ಬಂಧನ ಮಾಡಲಾಗಿದೆ ಎಂದು ಮಂಗಳೂರು ವಲಯದ ಐಜಿಪಿ ಅಮಿತ್ ಸಿಂಗ್ ಹೇಳಿದ್ದಾರೆ.
ಮುರಿನಕಟ್ಟೆಯು ಸುರಕ್ಷಿತ
ಎಸ್.ಪಿ. ದೀಪನ್ ಮಾತನಾಡಿ, ಮುರಿನಕಟ್ಟೆಯು ಸುರಕ್ಷಿತವಾಗಿದ್ದು ಯಾವುದೇ ಅನುಮಾನಕ್ಕೆ ಕಾರಣ ಇಲ್ಲ. ಮುರಿನಕಟ್ಟೆ ಕೆಡವಲಾಗಿದೆ ಎನ್ನುವ ಸುಳ್ಳು ಸುದ್ದಿ ಎಲ್ಲೆಡೆ ಹರಡಲಾಗಿದ್ದು ಯಾವುದೇ ಹಾನಿಯಾಗಿಲ್ಲ ಎಂದೂ ಅವರು ಹೇಳಿದ್ದಾರೆ. ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡುವ ಸಮಯದಲ್ಲಿ ಹೆದ್ದಾರಿ ಪಕ್ಕದಲ್ಲಿದ್ದ ಮುರಿನಕಟ್ಟೆ ಸ್ಥಳಾಂತರ ಮಾಡಲು ಆದೇಶ ನೀಡಲಾಗಿತ್ತು. ಹಿಂದೂ ಕಾರ್ಯಕರ್ತರ ನಿರಂತರ ಹೋರಾಟದ ಬಳಿಕ ಎನ್.ಎಚ್.ಎ.ಐ. ಸಿಬ್ಬಂದಿಯೇ ಪಕ್ಕದಲ್ಲಿ ಜಾಗ ಗುರುತಿಸಿ ಕೊಟ್ಟಿದ್ದಾರೆ. ಹೊಸದಾಗಿ ಕಟ್ಟೆಯನ್ನು ನಿರ್ಮಾಣ ಮಾಡಲಾಗಿತ್ತು. ಅನ್ಯ ಕೋಮಿನ ಯುವಕನೋರ್ವ ಕಟ್ಟೆಯ ವಿಡಿಯೋವನ್ನು ವೈರಲ್ ಮಾಡಿದ್ದರಿಂದ ಅನ್ಯಕೋಮಿನ ಜನ ಕಟ್ಟೆಯ ಹತ್ತಿರ ಜಮಾವಣೆಗೊಂಡು ಪರ್ಯಾಯ ಕಟ್ಟೆಗೆ ಹಾನಿ ಮಾಡಿದ್ದಾರೆ. ಈ ಸಂದರ್ಭ ಗುಂಪನ್ನು ಸಮಾಧಾನ ಪಡಿಸಲು ಹೋದ ಪೊಲೀಸ್ ಅಧಿಕಾರಿಗಳ ಮೇಲೂ ನೂಕಾಟ ತಳ್ಳಾಟ ಮಾಡಿದ ಗುಂಪನ್ನು ಚದುರಿಸಿ ಕಳುಹಿಸಲಾಗಿದೆ. ತಡರಾತ್ರಿ ಮತ್ತೆ ಕಟ್ಟೆಯನ್ನು ಕಟ್ಟಲು ಬಂದಿದ್ದ ಹಿಂದೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದರು.
ಘಟನೆಗೆ ಸಂಬಂಧಪಟ್ಟಂತೆ ಗಲಭೆ, ಪುಂಡಾಟಿಕೆ, ನಗರ ಠಾಣೆ ಪೊಲಿಸರ ಮೇಲೆ ಹಲ್ಲೆ, ಹೆದ್ದಾರಿ ತಡೆ, ವ್ಯಕ್ತಿಯ ಮೇಲಿನ ಹಲ್ಲೆ, ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ವಿಡಿಯೋ ಹರಿಬಿಟ್ಟಿರುವುದು ಸೇರಿ ಹಲವರ ಮೇಲೆ ಒಟ್ಟೂ ೪ ಪ್ರಕರಣಗಳನ್ನು ದಾಖಲು ಮಾಡಿದ್ದು, ಈ ವರೆಗೆ 6 ಜನರನ್ನು ಬಂಧಿಸಲಾಗಿದೆ ಎಂದ ಅವರು ಮುಂಜಾಗ್ರತಾ ಕ್ರಮವಾಗಿ ಬಿ.ಎನ್.ಎಸ್.ಎಸ್. ೧೬೩ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದೂ ಹೇಳಿದ್ದಾರೆ.
ಭಟ್ಕಳದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿದ್ದು ಹೆಚ್ಚಿನ ಬಂದೋಬಸ್ತಿಗಾಗಿ ೯ ಕೆ.ಎಸ್.ಆರ್.ಪಿ. ತುಕಡಿ, ೩ ಡಿ.ಎ.ಆರ್. ತುಕಡಿ ಸೇರಿದಂತೆ ಜಿಲ್ಲೆಯಿಂದ ೩೦೦ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದೂ ತಿಳಿಸಿದ ಅವರು ಭಟ್ಕಳದಲ್ಲಿ ಶಾಂತಿ ನೆಲೆಸಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎಸ್ಪಿ ಹೇಳಿದ್ದಾರೆ.