ಠಾಣೆ ಮುಂದೆ ತಡರಾತ್ರಿ ಧರಣಿ, ಕಟ್ಟೆ ಮರು ನಿರ್ಮಾಣಕ್ಕೆ ಆಗ್ರಹ: ಸ್ಥಳದಲ್ಲಿ ಭಾರೀ ಬಂದೋಬಸ್ತ್‌

ಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ನವಾಯತ್ ಕಾಲನಿ ಸನಿಹದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮಾರಿ ಒಜ್ಜೆ ಇಡುವ ಪ್ರದೇಶವಾದ ಮುರಿನಕಟ್ಟೆಯಲ್ಲಿ ಭಾನುವಾರ ಬೆಳಗ್ಗೆ ನಿರ್ಮಿಸಿದ ಮುರಿನಕಟ್ಟೆಯನ್ನು ಅನ್ಯಕೋಮಿನ ಗುಂಪು ಧ್ವಂಸಗೊಳಿಸಿದ್ದರಿಂದ ಆಕ್ರೋಶಗೊಂಡ ಹಿಂದೂ ಸಂಘಟನೆಯವರು ಭಾನುವಾರ ತಡರಾತ್ರಿ ವರೆಗೂ ನಗರ ಠಾಣೆಯಲ್ಲಿ ಧರಣಿ ನಡೆಸಿತು.

ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಪ್ರಮುಖರಾದ ಗೋವಿಂದ ನಾಯ್ಕ, ಶ್ರೀಕಾಂತ ನಾಯ್ಕ ಮತ್ತು ಹಿಂದೂ ಸಂಘಟನೆಯ ಪ್ರಮುಖರು, ಕಾರ್ಯಕರ್ತರು ಬೆಳಗ್ಗೆ ನಿರ್ಮಿಸಲಾದ ಮುರಿನಕಟ್ಟೆಯನ್ನು ಪೊಲೀಸರ ಎದುರೇ ಧ್ವಂಸಗೊಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಮುರಿನಕಟ್ಟೆ ಪ್ರದೇಶಕ್ಕೆ ಇತಿಹಾಸ ಇದೆ. ಇದೊಂದು ಹಿಂದೂಗಳ ಧಾರ್ಮಿಕ ಭಾವನೆ ಇರುವ ಪ್ರದೇಶವಾಗಿದೆ. ಇಲ್ಲಿ ಬೇರೆ ಬೇರೆ ಊರಿನಿಂದ ಮಾರಿಯಮ್ಮನ ಹೊರೆ ಬಂದು ಕುಳಿತುಕೊಳ್ಳುತ್ತದೆ. ಇದೊಂದು ಧಾರ್ಮಿಕ ಭಾವನಾತ್ಮ ಪ್ರದೇಶವಾಗಿದ್ದು, ಇದನ್ನು ಪೊಲೀಸ್ ಅಧಿಕಾರಿಗಳ ಎದುರೇ ಧ್ವಂಸ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.


ಪೊಲೀಸ್ ಅಧಿಕಾರಿಗಳು ಸಮಾಧಾನಿಸಲು ಯತ್ನಿಸಿದರೂ ಹಿಂದೂ ಮುಖಂಡರು, ಕಾರ್ಯಕರ್ತರು ಮುರಿನಕಟ್ಟೆ ಧ್ವಂಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಕಟ್ಟೆ ಪುನರ್ ನಿರ್ಮಾಣ ಮಾಡಿಕೊಡಬೇಕು. ಇಲ್ಲವೇ ಕಟ್ಟೆಯನ್ನು ನಾವೇ ಪುನರ್ ನಿರ್ಮಾಣ ಮಾಡುತ್ತೇವೆಂದು ಹೇಳಿದರು.

ನಂತರ ತಡರಾತ್ರಿ 2.30ರ ಸುಮಾರಿಗೆ ಮುರಿನಕಟ್ಟೆ ಪ್ರದೇಶಕ್ಕೆ ತೆರಳಿದ 15ಕ್ಕೂ ಅಧಿಕ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ. ಇದಕ್ಕೂ ಪೂರ್ವದಲ್ಲಿ ಮುರಿನಕಟ್ಟೆ ಪ್ರದೇಶದಲ್ಲಿ ಭಾನುವಾರ ರಾತ್ರಿ 8.30ಕ್ಕೆ ನೂರಾರು ಮುಸ್ಲಿಮರು ಸೇರಿ ಕಟ್ಟೆ ನಿರ್ಮಾಣಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಭಾನುವಾರ ಬೆಳಗ್ಗೆ ನಿರ್ಮಿಸಿದ ಮುರಿನಕಟ್ಟೆಯ ಕಲ್ಲನ್ನು ಕಬ್ಬಿಣದ ರಾಡಿನಿಂದ ಗುಂಪಿನಲ್ಲಿದ್ದ ಕೆಲವರು ದೂಡಿ ಹಾಕಿದರು. ಎಸ್ಪಿ ದೀಪನ್, ಇನ್‌ಸ್ಪೆಕ್ಟರ್ ದಿವಾಕರ ಜೊತೆ ಕಟ್ಟೆ ನಿರ್ಮಾಣದ ಬಗ್ಗೆ ತೀವ್ರ ಚರ್ಚೆ ನಡೆಸಿದರು. ಕೆಲವರು ದೊಡ್ಡದಾಗಿ ಬೊಬ್ಬೆ ಹೊಡೆದರು. ಈ ಸಂದರ್ಭ ಕೆಲವರು ಹೆದ್ದಾರಿ ತಡೆ ಮಾಡಿ ವಾಹನ ಸಂಚಾರ ಅಸ್ತವ್ಯಸ್ತ ಆಗುವಂತೆ ಮಾಡಿದರು. ಸ್ಥಳದಲ್ಲಿ ಒಂದು ರೀತಿಯ ಗೊಂದಲ ವಾತಾವರಣ ಉಂಟಾಗಿತ್ತು.

ಮುರಿನಕಟ್ಟೆಗೆ ಬಿಗು ಬಂದೋಬಸ್ತ್‌:

ಪಟ್ಟಣದ ನವಾಯತ್ ಕಾಲನಿಯ ಮುರಿನಕಟ್ಟೆ ವಿವಾದಿತ ಪ್ರದೇಶವಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್‌ ಹಾಕಲಾಗಿದೆ. ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ಬಂದೋಬಸ್ತ್‌ ಮಾಡಲಾಗಿದೆ. ಸ್ಥಳದಲ್ಲಿ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ. ಹೊರಗಿನಿಂದ ಬಂದ ಡಿವೈಎಸ್ಪಿ, ಸಿಪಿಐ, ಪಿಎಸ್ಐಗಳನ್ನು ಇಲ್ಲಿ ಬಂದೋಬಸ್ತಗೆ ನಿಯೋಜಿಸಲಾಗಿದೆ.

ಪೊಲೀಸರ ಪಥ ಸಂಚಲನ:

ಪಟ್ಟಣದಲ್ಲಿ ಮುರಿನಕಟ್ಟೆ ವಿವಾದದಿಂದ ಬಿಸಿ ವಾತಾವರಣ ನಿರ್ಮಾಣವಾದ ಹಿನ್ನೆಲೆ ಪೊಲೀಸರು ಪಟ್ಟಣದಲ್ಲಿ ಸೋಮವಾರ ಸಂಜೆ ಪಥ ಸಂಚಲನ ನಡೆಸಿ ಜನರಲ್ಲಿ ಧೈರ್ಯ ತುಂಬಿದರು.