ಕನ್ನಡಪ್ರಭ ವಾರ್ತೆ ಹುನಗುಂದ

ಮುತ್ಸದ್ದಿ ನಾಯಕ, ಮಾಜಿ ಸಚಿವ ಎಸ್.ಆರ್.ಕಾಶಪ್ಪನವರ ಗ್ರಾಮೀಣ ಜನರ ಕಷ್ಟ, ನೋವು ನಲಿವು ಆಲಿಸುವ ಮೂಲಕ ಜನನಾಯಕರಾಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದಿಂದ ಹಿಡಿದು ಸಚಿವರಾಗುವ ವರೆಗೂ ಕಾರ್ಯನಿರ್ವಹಿಸಿದ್ದಾರೆ ಎಂದು ರಂಭಾಪುರಿ ಮಹಾಪೀಠದ ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಹಾವರಗಿ ಗ್ರಾಮದ ಎಸ್.ಎಂ.ಎಸ್.ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡ ಎಸ್.ಆರ್.ಕಾಶಪ್ಪನವರ ಅವರ 24ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಾಶಪ್ಪನವರ ಮನೆತನ ಪಂಚಪೀಠದ ಬಗ್ಗೆ ಅಪಾರ ಪ್ರೀತಿ, ಗೌರವ, ಶ್ರದ್ಧೆ ಹೊಂದಿದ್ದಾರೆ. ವೀರಶೈವ ಲಿಂಗಾಯತದಲ್ಲಿ ಎಲ್ಲ ಒಳ ಪಂಗಡಗಳು ಒಂದಾಗಿ ಕೆಲಸ ಮಾಡಬೇಕು. ಭಿನ್ನಾಭಿಪ್ರಾಯ ಇರಬಾರದು ಜಾತಿ ವಿಚಾರದಲ್ಲಿ ಧರ್ಮ ಛಿದ್ರವಾಗುತ್ತಿವೆ ಎಂದರು.

ಶ್ರೀಶೈಲ ಮಹಾಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಾತನಾಡಿ, ಎಸ್.ಆರ್.ಕಾಶಪ್ಪನವರ ಧರ್ಮ, ಸಮಾಜ, ರಾಜಕೀಯ ಈ ಮೂರು ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಮಾಡಿದ್ದಾರೆ. ಅವರ ಹಾದಿಯಲ್ಲಿ ಪುತ್ರ ವಿಜಯಾನಂದ ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಿದ್ದು, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶೀರ್ವದಿಸಿದರು.

ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಶಾಸಕ ವಿಜಯಾನಂದ ಕಾಶಪ್ಪನವರು ಮಾತನಾಡಿ, ನಮ್ಮ ಮನೆತನಕ್ಕೆ ಪಂಚಪೀಠಾಧೀಶ್ವರ ಆಶೀರ್ವಾದದಿಂದಲೇ ಉತ್ತಮ ಸಂಸ್ಕಾರ ಬಂದಿದೆ. ಹುನಗುಂದ ಮತಕ್ಷೇತ್ರಕ್ಕೆ ಶಿಕ್ಷಣ, ಕೃಷಿ, ಆರೋಗ್ಯ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿ ಶ್ರಮಿಸಿ, ಮುಂದಿನ ದಿನಗಳಲ್ಲಿ ತಾಲೂಕನ್ನು ಸಂಪೂರ್ಣ ನೀರಾವರಿ ಮಾಡುವುದೇ ನನ್ನ ಗುರಿ ಎಂದರು.


ಗಿರಿಸಾಗರದ ರುದ್ರಮುನಿ ಸ್ವಾಮೀಜಿ, ಕೊಲ್ಹಾರದ ಜಗದ್ಗುರು ಯೋಗಿ ಕಲ್ಲಿನಾಥ ದೇವರು, ಸಿದ್ದನಕೊಳ್ಳದ ಡಾ.ಶಿವಕುಮಾರ ಸ್ವಾಮೀಜಿ, ಹುನಗುಂದ ಗಚ್ಚಿನಮಠದ ಅಮರೇಶ್ವರ ದೇವರು, ಎಸ್‌ಆರ್‌ಕೆ ಪ್ರತಿಷ್ಠಾನದ ಗೌರವಾಧ್ಯಕ್ಷೆ ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ವೀಣಾ ಕಾಶಪ್ಪನವರ, ಇಳಕಲ್ಲ ನಗರಸಭೆ ಮಾಜಿ ಅಧ್ಯಕ್ಷ ದೇವಾನಂದ ಕಾಶಪ್ಪನವರ ಇದ್ದರು. ಬೆಂಗಳೂರಿನ ಚಲನಚಿತ್ರ ನಿರ್ದೇಶಕ ಎಂ.ಎ.ಕುಪ್ಪೇಲೂರು(ರಾಜಾ) ಅವರಿಗೆ ಎಸ್.ಆರ್.ಕೆ. ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕದಲ್ಲಿ ವೀರಶೈವ ಲಿಂಗಾಯತರು ಎಲ್ಲರೂ ಒಗ್ಗಟ್ಟಾಗಿದ್ದರೆ. ಇದುವರೆಗೂ ಲಿಂಗಾಯತರೇ ಮುಖ್ಯಮಂತ್ರಿ ಆಗುತ್ತಿದ್ದರು. ಎಲ್ಲ ಒಳಪಂಗಡಗಳನ್ನು ಮರೆತು ಮತ್ತೆ ಒಂದಾದರೆ ವಿಜಯಾನಂದ ಕಾಶಪ್ಪನವರ ಮುಖ್ಯಮಂತ್ರಿ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಾನಂದ ಕಾಶಪ್ಪನವರ ಅವರನ್ನು ಪರಿಗಣಿಸಬೇಕು.-ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಾಶಿ ಪೀಠ