ಹಾವೇರಿ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಪಾರದರ್ಶಕವಾಗಿ ನಡೆಯುತ್ತಿದೆ. ಈವರೆಗೆ ಶೇ.98.56ರಷ್ಟು ಎನುಮರೇಷನ್ ನಮೂನೆ ವಿತರಣೆ ಮಾಡಲಾಗಿದೆ. ನಮೂನೆ ವಿತರಣೆಯಲ್ಲಿ ರಾಜ್ಯಕ್ಕೆ 7 ಹಾಗೂ ಗಣಕೀಕರಣದಲ್ಲಿ 3ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಸ್ಥಳೀಯ ಜಿಲ್ಲಾಧಿಕಾರಿಗಳ ಕಚೇರಿ ಕೋರ್ಟ್ ಹಾಲ್‌ನಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ದೋಷರಹಿತ ಶುದ್ಧ ಹಾಗೂ ಆರೋಗ್ಯಕರ ಮತದಾರರ ಪಟ್ಟಿ ತಯಾರಿ ಹಿನ್ನೆಲೆಯಲ್ಲಿ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡುತ್ತಿದ್ದು, ಎಸ್‌ಐಆರ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳಿಂದ ಮತದಾರರು ಯಾವುದೇ ಗೊಂದಲಗಳಿಗೆ ಒಳಗಾಗಬಾರದು. ಜಿಲ್ಲೆಯಲ್ಲಿ ಈವರೆಗೆ 13,35,342 ಮತದಾರರ ಪೈಕಿ 13,16,084(ಶೇ.98.56) ಎನುಮರೇಷನ್ ನಮೂನೆ ವಿತರಣೆ ಮಾಡಲಾಗಿದೆ. 4,39,773 (32.93) ಗಣಕೀಕರಣ ಮಾಡಲಾಗಿದೆ ಎಂದು ಹೇಳಿದರು.

ಎಸ್‌ಐಆರ್ ಕಾರ್ಯದಲ್ಲಿ ಏನೇ ಸಮಸ್ಯೆಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು. ಜಿಲ್ಲಾಡಳಿತದಿಂದ ಈ ಕಾರ್ಯವನ್ನು ಅತ್ಯಂತ ಪಾರದರ್ಶಕವಾಗಿ ಮಾಡಲಾಗುತ್ತಿದೆ. ನಾನು ಸಹ ಮತಗಟ್ಟೆಗಳಿಗೆ ಹಾಗೂ ಎಸ್‌ಐಆರ್ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ಯಾವುದೇ ಲೋಪಗಳು ಆಗದಂತೆ ನಿಗಾವಹಿಸಲಾಗಿದೆ. ಸಣ್ಣಪುಟ್ಟ ಸಮಸ್ಯೆಗಳು ಕಂಡುಬಂದಲ್ಲಿ ನಮ್ಮ ಗಮನಕ್ಕೆ ತಂದರೆ ಅವುಗಳನ್ನು ನಿವಾರಿಸಲಾಗುವುದು ಎಂದು ತಿಳಿಸಿದರು.

ಅಧಿಕಾರಿಗಳಿಂದ ಪರಿಶೀಲನೆ:

ಬಿಎಲ್‌ಒಗಳು ನೀಡಿದ ಎನುಮರೇಷನ್ ನಮೂನೆ ಮಾಹಿತಿ ಗಣಕೀಕರಣ ಮಾಡುವ ಮುನ್ನ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ಇಬ್ಬರು ತಾಲೂಕು ಮಟ್ಟದ ಅಧಿಕಾರಿಗಳಿಂದ ಪರಿಶೀಲಿಸಿ ಸರಿಯಾಗಿದ್ದರೆ ಮಾತ್ರ ಗಣಕೀಕರಣ ಮಾಡಲಾಗುತ್ತಿದೆ ಎಂದರು.


ಮರಣ, ಸ್ಥಳಾಂತರ, ಗೈರು, ಎರಡು ಕಡೆ ಮತದಾರರ ಹೆಸರು ಇರುವ ಕುರಿತು ಸ್ಥಳೀಯ ಬಿಎಲ್‌ಎಗಳು ನಿಗಾವಹಿಸಬೇಕು. ಇಂತಹ ಪ್ರಕರಣಗಳ ಕುರಿತು ಬಿಎಲ್‌ಒಗಳಿಗೆ ಮಾಹಿತಿ ನೀಡಿದರೆ ಯಾವುದೇ ಗೊಂದಲಗಳು ಉಂಟಾಗದಂತೆ ತಡೆಯಬಹುದು ಎಂದು ಸಲಹೆ ನೀಡಿದರು.

ಎಸ್‌ಐಆರ್ ಕಾರ್ಯಚಟುವಟಿಕೆ ಕುರಿತು ಪ್ರತಿ ದಿನ ಬಿಎಲ್‌ಒಗಳ ವಿಡಿಯೋ ಕಾನ್ಫರೆನ್ಸ್ ಸಭೆ ಮಾಡಲಾಗುತ್ತದೆ. ಪ್ರತಿ ಮನೆಗೆ ಭೇಟಿ ನೀಡಿದ ಸಮಯ, ಸ್ಥಳದ ಕುರಿತು ಫೋಟೋ ಕಲೆಹಾಕಲು ತಿಳಿಸಲಾಗಿದೆ. ಮತದಾರರೊಂದಿಗೆ ಆತ್ಮೀಯವಾಗಿ ಮಾತನಾಡಲು ತಿಳಿಸಲಾಗಿದೆ. ಬಿಎಲ್‌ಎಗಳ ಸಮನ್ವಯದೊಂದಿಗೆ ಎಸ್‌ಐಆರ್ ಕಾರ್ಯ ಮಾಡಲು ಬಿಎಲ್‌ಒಗಳಿಗೆ ತಿಳಿಸಲಾಗಿದೆ. ನಿಗದಿತ ಕಾಲಮಿತಿಯೊಳಗೆ ಯಶಸ್ವಿಯಾಗಿ ಎಸ್‌ಐಆರ್ ಕಾರ್ಯ ಮಾಡಲು ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದೆ ಎಂದರು.

ಯಾವುದೇ ಧಾರ್ಮಿಕ ಸ್ಥಳ, ಸಮುದಾಯ ಭವನ, ಕಲ್ಯಾಣ ಮಂಟಪದಲ್ಲಿ ಮತದಾರರನ್ನು ಒಗ್ಗೂಡಿಸಿ ವಿತರಣೆ ಅಥವಾ ಸಂಗ್ರಹಣೆ ಮಾಡಲು ಅವಕಾಶವಿರುವುದಿಲ್ಲ. ಜು. 29ರ ವರೆಗೆ ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಬಿಎಲ್‌ಒಗಳು ಹಾಗೂ ಬಿಎಲ್‌ಎಗಳು ಮನೆ ಮನೆಗೆ ಭೇಟಿ ನೀಡಿ, ಎನುಮರೇಷನ್ ನಮೂನೆ ನೀಡಬೇಕು ಹಾಗೂ ಸಂಗ್ರಹಣೆ ಮಾಡಬೇಕು ಎಂದರು.

ಎನುಮರೇಷನ್ ನಮೂನೆಗಳನ್ನು ಭರ್ತಿಮಾಡಲು ಬರದ ಮತದಾರರು ಅಗತ್ಯ ಸಹಾಯಕ್ಕಾಗಿ ಮತದಾರರ ಸೌಲಭ್ಯ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ನಮೂನೆಗಳನ್ನು ಭರ್ತಿಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಪ್ರಸ್ತುತ ಎನುಮರೇಷನ್ ನಮೂನೆ ಮಾತ್ರ ಭರ್ತಿಗೆ ಅವಕಾಶವಿದ್ದು, ಹೊಸ ಮತದಾರರ ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ ನಮೂನೆಗಳನ್ನು ವಿತರಣೆ ಮಾಡುತ್ತಿಲ್ಲ. ಎಸ್‌ಐಆರ್ ಕಾರ್ಯಾಚರಣೆ ನಂತರ ಹೊಸ ಮತದಾರರ ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ ಮಾಡಲಾಗುತ್ತದೆ ಎಂದು ತಿಳಿಸಿದರು.

ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಪ್ರತಿವಾರ ತಮ್ಮ ಕ್ಷೇತ್ರದ ತಾಲೂಕು ಕೇಂದ್ರ ಸ್ಥಾನದಲ್ಲಿ ತಾಲೂಕಿನ ರಾಜಕೀಯ ಪಕ್ಷದ ಮುಖಂಡರ ಸಭೆ ಜರುಗಿಸಿ, ಅಂಕಿ-ಅಂಶಗಳನ್ನು ನೀಡಲು ಹಾಗೂ ಸಭೆಯ ನಡುವಳಿ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್., ಮಾತನಾಡಿ, ಎಸ್‌ಐಆರ್ ಕಾರ್ಯವನ್ನು ಬಹಳ ಜಾಗರೂಕತೆಯಿಂದ ಮಾಡಲು ಬಿಎಲ್‌ಒಗಳಿಗೆ ಸೂಚನೆ ನೀಡಲಾಗಿದೆ. ಮತದಾರರ ಪರಿಶುದ್ಧ ಪಟ್ಟಿ ತಯಾರಿಕೆ ಕಾರ್ಯವನ್ನು ಜಿಲ್ಲಾಡಳಿತ ಬಹಳ ಪಾರದರ್ಶಕವಾಗಿ ಮಾಡುತ್ತಿದೆ. ಎಸ್‌ಐಆರ್ ಕಾರ್ಯದಲ್ಲಿ ಯಾವುದೇ ಗೊಂದಲ ಆಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ಶುಕ್ರವಾರ ರಾಜಕೀಯ ಪಕ್ಷಗಳ ಮುಖಂಡರ ಸಭೆ ಮಾಡಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಚುನಾವಣಾ ತಹಸೀಲ್ದಾರ್‌ ಅಮೃತಗೌಡ ಪಾಟೀಲ, ರಾಜಕೀಯ ಪಕ್ಷದ ಮುಖಂಡರು ಉಪಸ್ಥಿತರಿದ್ದರು.