ಕನ್ನಡಪ್ರಭ ವಾರ್ತೆ ಬೆಂಗಳೂರು

ಭಾರತೀಯ ಚಿತ್ರರಂಗದ ದಿಗ್ಗಜ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ಸಿಗಬೇಕಿತ್ತು. ಆದರೆ, ಅವರಿಗೆ ಸೂಕ್ತ ಗೌರವ ದೊರೆಯಲಿಲ್ಲ ಎಂದು ಪದ್ಮಭೂಷಣ ಪುರಸ್ಕೃತ ಶತಾವಧಾನಿ ಡಾ.ಆರ್‌.ಗಣೇಶ್‌ ಬೇಸರ ವ್ಯಕ್ತಪಡಿಸಿದರು.

ಭಾನುವಾರ ಬಸವನಗುಡಿಯ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ‘ವಿಶ್ವಸಂವಾದ ಕೇಂದ್ರ-ಕರ್ನಾಟಕ’ ಆಯೋಜಿಸಿದ್ದ ‘ವಿಎಸ್‌ಕೆ ಮಾಧ್ಯಮ ಪ್ರಶಸ್ತಿ’ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಗಾಯಕಿ ಲತಾ ಮಂಗೇಶ್ಕರ್ ಸಹ ಭಾರತೀಯ ಚಿತ್ರರಂಗಕ್ಕೆ ಅಮೋಘ ಕೊಡುಗೆ ಕೊಟ್ಟಿದ್ದಾರೆ. ಆದರೆ, ಹಾಡಿನ ವೈವಿಧ್ಯತೆಯಲ್ಲಿ ಲತಾ ಮಂಗೇಶ್ಕರ್ ಅವರ ಸಾಧನೆಗಿಂತ ಎಸ್.ಜಾನಕಿ ಅವರ ಸಾಧನೆ ಭಿನ್ನವಾಗಿದೆ. ಆದ್ದರಿಂದ, ‘ಭಾರತ ರತ್ನ’ ಪಡೆಯಲು ಎಸ್.ಜಾನಕಿ ಅವರಿಗೆ ಅರ್ಹತೆ ಇತ್ತು. ತನಗಿಂತ ಕಡಿಮೆ ವಯಸ್ಸಿನವರಿಗೆ ಪುರಸ್ಕಾರ ಕೊಟ್ಟಿದ್ದರ ಬಗ್ಗೆ ಅವರಿಗೆ ಬೇಸರ ಇತ್ತು. ಅದಕ್ಕಾಗಿ ಹಲವು ಪ್ರಶಸ್ತಿಗಳನ್ನು ತಿರಸ್ಕರಿಸಿದ್ದರು ಎಂದರು.

ಗೌರವಕ್ಕೆ ಮೀಸಲಾತಿ ಇರಬಾರದು. ಜತೆಗೆ, ಯಾವುದೇ ಕಾರಣಕ್ಕೂ ಗೌರವ ಮಲೀನ ಆಗಬಾರದು. ವರ್ತಮಾನ ಮೀರಿ ನಿಂತಿರುವ ಮಾಧ್ಯಮಗಳು ಜನರಿಗೆ ಬೇಕಿರುವ ವಿಚಾರ ಹೇಳುವುದು ಒಳ್ಳೆಯದು ಎಂದರು. ವಿಶ್ವ ಸಂವಾದ ಕೇಂದ್ರ ಕರ್ನಾಟಕದ ನಿರ್ವಾಹಕ ವಿಶ್ವಸ್ಥ ಡಾ.ಎಂ.ಕೆ.ಶ್ರೀಧರನ್ ಹಾಜರಿದ್ದರು.

ವಿಎಸ್‌ಕೆ ಮಾಧ್ಯಮ ಪ್ರಶಸ್ತಿ ಪುರಸ್ಕೃತರು


ವಿಜಯವಾಣಿ ಪತ್ರಿಕೆ ಸಂಪಾದಕ ಕೆ.ಎನ್.ಚನ್ನೇಗೌಡ- ‘ತಿ.ತಾ.ಶರ್ಮಾ ಪ್ರಶಸ್ತಿ, ಹಿರಿಯ ಪತ್ರಕರ್ತ ನಾ. ಕಾರಂತ ಪೆರಾಜೆ- ‘ಬೆ.ಸು.ನಾ.ಮಲ್ಯ ಪ್ರಶಸ್ತಿ’, ನಾಗಾರ್ಜುನ್ ದ್ವಾರಕನಾಥ್‌- ‘ಎಂ.ವಿ.ಕಾಮತ್ ಪ್ರಶಸ್ತಿ, ರಂಗನಾಥ್ ಭಾರದ್ವಾಜ್‌- ‘ಚಂದ್ರಶೇಖರ ಭಂಡಾರಿ’ ಪತ್ರಿಕೋದ್ಯಮ ಪ್ರಶಸ್ತಿ, ಡಾ.ಅರಕಲಗೂಡು ಸೂರ್ಯಪ್ರಕಾಶ್‌- ‘ಹೂ.ವೆ.ಶೇಷಾದ್ರಿ ಅಂಕಣಕಾರ ಪ್ರಶಸ್ತಿ ಹಾಗೂ ಆರ್‌ಜೆ ರಶ್ಮಿಗೆ ‘ವಿಎಸ್‌ಕೆ ಡಿಜಿಟಲ್’ ಮಾಧ್ಯಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.