ಕನ್ನಡಪ್ರಭ ವಾರ್ತೆ ಬೆಂಗಳೂರುರಾಜಧಾನಿ ಬೆಂಗಳೂರಿಗೆ ಈ ಬಾರಿ ಮುಂಗಾರು ದೊಡ್ಡ ಪ್ರಮಾಣದಲ್ಲೇ ಕೈಕೊಟ್ಟಿದ್ದು, ನಗರದಲ್ಲಿ ವ್ಯಾಪಕ ಮಳೆಯಾಗಿ ಬರೋಬ್ಬರಿ 16 ದಿನಗಳು ಕಳೆದಿವೆ. ಬೆಂಗಳೂರು ನಗರದಲ್ಲಿ ಜುಲೈನಲ್ಲಿ ಸರಾಸರಿ 94 ಮಿ.ಮೀ ಮಳೆಯಾಗುತ್ತದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ 87 ಮಿ.ಮೀ ಮಳೆಯಾಗಿತ್ತು. ಆದರೆ, ಈ ವರ್ಷದ ಜುಲೈನಲ್ಲಿ ಒಂದೂ ಬಾರಿಯೂ ಉತ್ತಮ ಮಳೆ ಬೀಳದಿರುವುದು ತೀವ್ರ ಆತಂಕ ಮೂಡಿಸಿದೆ. ವಿಶೇಷವಾಗಿ ಕೊಳವೆಬಾವಿ ನೀರು ಅವಲಂಬಿಸಿರುವ ಅಪಾರ್ಟ್‌ಮೆಂಟ್, ಬಹುಮಹಡಿ ಕಟ್ಟಡಗಳು, ವಾಣಿಜ್ಯ ಕೇಂದ್ರಗಳಿಗೆ ಮಳೆಗಾಲದಲ್ಲೇ ಆತಂಕ ಶುರುವಾಗಿದೆ.ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ವರದಿ ಪ್ರಕಾರ, ಜು.1ರಿಂದ 10ರವರೆಗೆ ಬೆಂಗಳೂರು ಉತ್ತರ ತಾಲೂಕು ಮತ್ತು ಬೆಂಗಳೂರು ಪೂರ್ವ ತಾಲೂಕಿನಲ್ಲಿ ಒಂದೇ ಒಂದು ಮಿ.ಮೀ ಕೂಡ ಮಳೆ ಬಿದ್ದಿಲ್ಲ. ಈ ಎರಡು ತಾಲೂಕುಗಳಲ್ಲಿ ಶೇ.99ರಷ್ಟು ಮಳೆ ಕೊರತೆಯಾಗಿದೆ.

ಇನ್ನು ಯಲಹಂಕ ತಾಲೂಕಿನಲ್ಲಿ ಕೇವಲ 2 ಮಿ.ಮೀ ಬಿದ್ದಿದ್ದು, ಶೇ.91ರಷ್ಟು ಮಳೆ ಕೊರತೆಯಾಗಿದೆ. ಹೊಸಕೋಟೆ ತಾಲೂಕಿನಲ್ಲಿ 6 ಮಿ.ಮೀ ಮಳೆಯಾಗಿದ್ದು, ಶೇ.66ರಷ್ಟು ಮಳೆ ಕೊರತೆಯಾಗಿದೆ. ಆನೇಕಲ್‌ ತಾಲೂಕಿನಲ್ಲಿ ಶೇ.100ರಷ್ಟು ಮಳೆ ಕೊರತೆಯಾಗಿದೆ.

ದುರ್ಬಲ ಮುಂಗಾರು ಕಾರಣ: ಸಾಮಾನ್ಯವಾಗಿ ಮುಂಗಾರು ಅವಧಿಯಲ್ಲಿ ಕರಾವಳಿ, ಮಲೆನಾಡಿನಲ್ಲಿ ಉತ್ತಮ ಮಳೆಯಾದರೆ ಅದು ರಾಜ್ಯದ ಒಳನಾಡನ್ನು ವ್ಯಾಪಿಸಿಕೊಂಡು ಬೆಂಗಳೂರು ನಗರಕ್ಕೆ ಉತ್ತಮ ಮಳೆ ಸುರಿಸುತ್ತದೆ. ಆದರೆ, ಈ ಬಾರಿ ಈ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಹೀಗಾಗಿ, ಬೆಂಗಳೂರು ನಗರವೂ ಕೂಡ ಮಳೆ ಕೊರತೆ ಎದುರಿಸುತ್ತಿದೆ. ಜು.16ರವರೆಗೆ ಬೆಂಗಳೂರಿಗೆ ಮಳೆಯಾಗುವ ಮುನ್ಸೂಚನೆ ಕಂಡು ಬರುತ್ತಿಲ್ಲ ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಕೊಳವೆಬಾವಿ ನೀರಿನ ಆತಂಕ:

ಮಳೆ ಕೊರತೆ ಇದೇ ರೀತಿ ಮುಂದುವರಿದರೆ ನಗರಕ್ಕೆ ಕುಡಿಯುವ ನೀರಿನ ಆತಂಕ ಎದುರಾಗಲಿದೆ. ಅದರಲ್ಲೂ ಕೊಳವೆಬಾವಿ ನೀರನ್ನು ನಂಬಿಕೊಂಡಿರುವ ಅಪಾರ್ಟ್‌ಮೆಂಟ್‌ಗಳು, ಬಹುಮಹಡಿ ಕಟ್ಟಡಗಳು, ವಾಣಿಜ್ಯ ಕೇಂದ್ರಗಳು ತೀವ್ರ ನೀರಿನ ಸಮಸ್ಯೆ ಎದುರಿಸಲಿವೆ. ಮಳೆಯಿಲ್ಲದೇ ಅಂತರ್ಜಲ ಕುಸಿತದಿಂದ ಕೊಳವೆಬಾವಿಗಳು ಬತ್ತಿಹೋಗುವ ಅಥವಾ ನೀರಿನ ಪ್ರಮಾಣ ಗಣನೀಯವಾಗಿ ಕುಸಿಯುವ ಆತಂಕವಿದೆ. ಕುಡಿಯುವ ನೀರನ್ನು ಮಿತವಾಗಿ ಬಳಕೆ ಮಾಡುವಂತೆ ಬೆಂಗಳೂರು ಜಲಮಂಡಳಿ ಈಗಾಗಲೇ ನಗರದ ಜನರಿಗೆ ಎಚ್ಚರಿಕೆ ನೀಡಿದೆ.


ತಾಪಮಾನವೂ ಏರಿಕೆ: ಮಳೆಯಿಲ್ಲದ ಕಾರಣ ನಗರದ ತಾಪಮಾನವೂ ಸರಾಸರಿಗಿಂತ 3 ಡಿಗ್ರಿ ಸೆಲ್ಸಿಯಸ್‌ವರೆಗೂ ಹೆಚ್ಚಳವಾಗಿದ್ದು, ಶನಿವಾರ ಹಾಗೂ ಭಾನುವಾರ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಜು.16ರವರೆಗೆ ಇದೇ ವಾತಾವರಣ ಮುಂದುವರಿಯಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.