ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ತುಡಿತವೇ ವೈ. ರಾಮಕೃಷ್ಣ ಅವರ ಬದುಕಿನ ಮೂಲಮಂತ್ರವಾಗಿತ್ತು.
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಸಮಾಜದ ಏಳಿಗೆಗಾಗಿ ದಿವಂಗತ ಮಾಜಿ ಸಚಿವ ವೈ. ರಾಮಕೃಷ್ಣ ಕೈಗೊಂಡ ದೂರದೃಷ್ಟಿಯ ನಿರ್ಧಾರಗಳು ಇಂದಿಗೂ ಸಾವಿರಾರು ಜನರಿಗೆ ಆಶ್ರಯ ಮತ್ತು ಆತ್ಮವಿಶ್ವಾಸ ನೀಡಿವೆ ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣ ಸ್ವಾಮಿ ಹೇಳಿದರು.ತಾಲೂಕಿನ ಸಿದ್ದನಹುಂಡಿ ಗ್ರಾಮದಲ್ಲಿ ಮಾಜಿ ಸಚಿವ ದಿವಂಗತ ವೈ. ರಾಮಕೃಷ್ಣ ಬಡಾವಣೆ ಹಾಗೂ ಮಾರ್ಗಗಳ ಫಲಕ ಉದ್ಘಾಟಿಸಿ ಮಾತನಾಡಿದ ಅವರು, ಶಾಸಕರಾಗಿ, ಸಚಿವರಾಗಿ ವೈ. ರಾಮಕೃಷ್ಣ ಅವರು ಸಮಾಜದ ಅಭಿವೃದ್ಧಿಯನ್ನೇ ತಮ್ಮ ಜೀವನದ ಗುರಿಯನ್ನಾಗಿಸಿಕೊಂಡಿದ್ದರು. ಜೆಡಿಎಸ್ ಹಾಗೂ ಕಾಂಗ್ರೆಸ್ ನಲ್ಲಿ ರಾಜಕೀಯ ಜೀವನ ಆರಂಭಿಸಿ ಬಳಿಕ ಬಿಜೆಪಿಗೆ ಸೇರ್ಪಡೆಯಾದ ವೇಳೆ ಅವರೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ದೊರೆತಿದ್ದು, ಅವರ ಗಟ್ಟಿ ನಿರ್ಧಾರ ಮತ್ತು ಸಮಾಜಮುಖಿ ಚಿಂತನೆಗಳು ತಮ್ಮ ಮೇಲೆ ಆಳವಾದ ಪ್ರಭಾವ ಬೀರಿವೆ ಎಂದು ಹೇಳಿದರು.
ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ತುಡಿತವೇ ವೈ. ರಾಮಕೃಷ್ಣ ಅವರ ಬದುಕಿನ ಮೂಲಮಂತ್ರವಾಗಿತ್ತು. ಅವರು ತೆಗೆದುಕೊಂಡ ಐತಿಹಾಸಿಕ ನಿರ್ಧಾರಗಳಿಂದ ನೂರಾರು ಕುಟುಂಬಗಳು ತಮ್ಮದೇ ನೆಲೆ ಕಂಡುಕೊಂಡಿವೆ. ಇಂತಹ ನಿರ್ಧಾರಗಳ ಮೌಲ್ಯವನ್ನು ಯಾವುದೇ ಹಣದಿಂದ ಅಳೆಯಲು ಸಾಧ್ಯವಿಲ್ಲ. ಆ ಸೇವೆಯನ್ನು ಮುಂದುವರಿಸಿಕೊಂಡು ಬಂದಿರುವ ವೈ. ರಾಮಕೃಷ್ಣ ಅವರ ಕುಟುಂಬ ಅಭಿನಂದನೆಗೆ ಅರ್ಹವಾಗಿದೆ ಎಂದರು.ಮೈಸೂರಿನಲ್ಲಿ ದಿವಂಗತ ಎನ್. ರಾಚಯ್ಯ, ನರಸಿಂಹಮೂರ್ತಿ, ವೈ. ರಾಮಕೃಷ್ಣ ಹಾಗೂ ಚನ್ನಗಿರಯ್ಯ ಅವರಂತಹ ನಾಯಕರ ವ್ಯಕ್ತಿತ್ವ ಮತ್ತು ಜನಬೆಂಬಲದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷ ಹಲವು ಬಾರಿ ಅಧಿಕಾರಕ್ಕೆ ಬಂದಿತ್ತು. ಆ ಕಾಲದಲ್ಲಿ ಮಾದಿಗ ಸಮುದಾಯದ ನಾಯಕತ್ವಕ್ಕೆ ಇದ್ದ ಗೌರವವೇ ವಿಭಿನ್ನವಾಗಿತ್ತು. ಈ ನಾಯಕರು ಶಿಫಾರಸು ಮಾಡಿದರೆ ಯಾವುದೇ ರಾಜಕೀಯ ಪಕ್ಷ ಅಭ್ಯರ್ಥಿಗಳಿಗೆ ಬಿ-ಫಾರಂ ನೀಡಲು ಮುಂದಾಗುತ್ತಿತ್ತು. ಸಮಾಜದ ಏಕತೆ ಮತ್ತು ನಾಯಕತ್ವದ ಶಕ್ತಿಯೇ ಅದಕ್ಕೆ ಕಾರಣವಾಗಿತ್ತು ಎಂದು ಅವರು ಹೇಳಿದರು.
ಮಾಜಿ ಸಚಿವ ಎಂ. ಶಿವಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿವಿಧ ಸಮಾಜಗಳು ತಮ್ಮ ಸಮುದಾಯದ ಗಣ್ಯರ ಹೆಸರನ್ನು ರಸ್ತೆ, ಬಡಾವಣೆ ಹಾಗೂ ಸಾರ್ವಜನಿಕ ಸ್ಥಳಗಳಿಗೆ ನಾಮಕರಣ ಮಾಡುವುದು ಸಾಮಾನ್ಯವಾಗಿದೆ. ಸಮಾಜದ ಸಂಘಟನೆ ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆಯಾಗಿದ್ದು, ವೈ. ರಾಮಕೃಷ್ಣ ಬಡಾವಣೆಯಲ್ಲಿ ಮಾದಾರ ಚೆನ್ನಯ್ಯ ಹಾಗೂ ಅರುಂಧತಿ ಅವರ ಹೆಸರನ್ನು ಮಾರ್ಗಗಳಿಗೆ ನಾಮಕರಣ ಮಾಡಿರುವುದು ರಾಜ್ಯದಲ್ಲೇ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವಂತಾಗಿದೆ ಎಂದರುವೈ. ರಾಮಕೃಷ್ಣ ಅವರ ಪುತ್ರ ಲೋಕೇಶ್ ಮಾತನಾಡಿ, ಸಿದ್ದನಹುಂಡಿ ಗ್ರಾಮವನ್ನು ಹಿಂದೆ ಯಾರೂ ಗುರುತಿಸುವ ಸ್ಥಿತಿ ಇರಲಿಲ್ಲ. ಗ್ರಾಮ ಅಭಿವೃದ್ಧಿಗಾಗಿ ಬಡಾವಣೆ ನಿರ್ಮಾಣಕ್ಕೆ ಸರ್ಕಾರ ₹ 2.80 ಲಕ್ಷ ಅನುದಾನ ನೀಡಿತ್ತು. 2021ರಲ್ಲಿಯೇ ಬಡಾವಣೆಗೆ ವೈ. ರಾಮಕೃಷ್ಣ ಅವರ ಹೆಸರಿಡುವಂತೆ ಸೋಸಲೆ ಗ್ರಾಪಂ ಅನುಮೋದನೆ ನೀಡಿದ್ದರೂ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಕೊನೆಗೆ ತಾವೇ ಮುಂದಾಗಿ ಬಡಾವಣೆಗೆ ವೈ. ರಾಮಕೃಷ್ಣ ಅವರ ಹೆಸರನ್ನು ನಾಮಕರಣ ಮಾಡಿರುವುದಾಗಿ ತಿಳಿಸಿದರು.
ಬೀದರ್‌ನಿಂದ ಕೊಳ್ಳೇಗಾಲದವರೆಗೆ ಮಾದಿಗ ಸಮುದಾಯದ ಕಾಲೊನಿಗಳಲ್ಲಿ ಪ್ರವಾಸ ಮಾಡಿರುವ ಅನುಭವವನ್ನು ಅವರು ಹಂಚಿಕೊಂಡರು.ರಾಮನಗರ ಜಿಲ್ಲೆ ಕೆಡಿಪಿ ಸದಸ್ಯ ಗುರುಮೂರ್ತಿ, ಆರ್. ಲೋಕೇಶ್, ಆರ್. ಕೃಷ್ಣಮೂರ್ತಿ, ಹುಬ್ಬಳ್ಳಿ ಮೋಹನ್ ಹಿರೇಮನೆ, ಹುಣಸೂರು ನಗರಸಭೆ ಸದಸ್ಯ ಶಿವಕುಮಾರ್, ವಕೀಲ ಎಂ. ದಾಸಯ್ಯ, ವಕೀಲ ಪ್ರಕಾಶ್, ಬೂದಿತಿಟ್ಟು ರಾಜೇಂದ್ರ, ವಿಜಯಕುಮಾರ್, ಬೆಳಗಾವಿ ರಾಜೇಂದ್ರ ಐಹೊಳೆ. ಚಿಕ್ಕಬಳ್ಳಾಪುರ ವೇಣು, ಅಲೆಮಾರಿ ಸಮುದಾಯದ ಅಧ್ಯಕ್ಷ ಲೋಕೇಶ್, ಮಾದಪ್ಪ ಮಾದಿಗರ, ಆರ್ಯ ಗುರೂಜಿ, ಸಿ. ಮಹದೇವ, ನಿವೃತ್ತ ಪೊಲೀಸ್ ಅಧಿಕಾರಿ ಮಲ್ಲೇಶ್, ಕೃಷ್ಣಮೂರ್ತಿ, ಬಿ.ಕೆ. ಶಿವಣ್ಣ, ದುದ್ದಗೆರೆ ಮಾದೇಶ, ರಂಗಕರ್ಮಿ ಕತ್ಯಾಣಿ, ರಾಚಪ್ಪ, ವೆಂಕಟೇಶ್, ಕೊಳ್ಳೇಗಾಲ ಸಿದ್ದಪ್ಪ, ಶಂಕರ್, ಕೆಬ್ಬೆ ಪ್ರಸಾದ್, ಗೋಪಿ, ಕೃಷಿಕ ಶ್ರೀನಿವಾಸಮೂರ್ತಿ ಮೊದಲಾದವರು ಇದ್ದರು.