ಕನ್ನಡಪ್ರಭ ವಾರ್ತೆ ಲೋಕಾಪುರ
ಕಳೆದೆರಡು ದಿನಗಳ ಹಿಂದೆ ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಚಗಲ್ಲ ಸಮೀಪದ ಕಬ್ಬಿನ ಹೊಲದಲ್ಲಿ ಮಹಿಳೆಯೊಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಹಲಗಲಿ ಗ್ರಾಮದ ಸೋಮು ಕೋಲೂರ (34) ಎಂಬಾತನ ಶವ ಗ್ರಾಮ ವ್ಯಾಪ್ತಿಯ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಎರಡು ದಿನಗಳ ಹಿಂದೆ ವರ್ಚಗಲ್ಲ ಸಮೀಪದ ಕಬ್ಬಿನ ಹೊಲದಲ್ಲಿ ಅನಸೂಯಾ ಎಂಬ ಮಹಿಳೆಯ ಶವ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಸೋಮು ಕೋಲೂರನೇ ಹತ್ಯೆ ನಡೆಸಿದ್ದಾನೆ ಎಂದು ಮೃತೆಯ ಸಂಬಂಧಿಕರು ಆರೋಪಿಸಿ ಲೋಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು.ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತ ಅನಸೂಯಾ ಮತ್ತು ಸೋಮು ನಡುವೆ ಹಲವು ವರ್ಷಗಳಿಂದ ವಿವಾಹೇತರ ಸಂಬಂಧ ಇತ್ತು ಎನ್ನಲಾಗಿದೆ. ಈ ವಿಚಾರವಾಗಿ ಗ್ರಾಮಸ್ಥರು ಹಾಗೂ ಕುಟುಂಬದವರು ಹಲವು ಬಾರಿ ತಿಳಿಹೇಳಿದ್ದರೂ, ಇಬ್ಬರ ನಡುವೆ ಸಂಪರ್ಕ ಮುಂದುವರಿದಿತ್ತು ಎಂದು ಹೇಳಲಾಗುತ್ತಿದೆ.
ಮೃತಳ ಕುಟುಂಬದ ಆರೋಪದಂತೆ, ಜುಲೈ 7ರಂದು ಅನಸೂಯಾಳನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಹತ್ಯೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಇದೀಗ ಪ್ರಕರಣದ ಪ್ರಮುಖ ಆರೋಪಿ ಸೋಮು ಕೋಲೂರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಬೇರೆ ಕಾರಣವೋ ಎಂಬ ಕುರಿತು ಪೊಲೀಸರು ತನಿಖೆ ಬಳಿವಷ್ಟೇ ಬೆಳಕಿಗೆ ಬರಬೇಕಿದೆ. ಪ್ರಕರಣದ ಬಗ್ಗೆ ಲೋಕಾಪುರ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
