ಬ್ಯಾಟರಾಯನಪುರ ಹೊಸಗುಡ್ಡದಹಳ್ಳಿಯಲ್ಲಿ ಇತ್ತೀಚೆಗೆ ನಡೆದಿದ್ದ ಒಂಟಿ ಮಹಿಳೆ ಕೊಲೆ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
-ಪೊಲೀಸರ ತನಿಖೆಯಲ್ಲಿ ಬಯಲು । ಬ್ಯಾಟರಾಯನಪುರ ಠಾಣೆ ಪೊಲೀಸರಿಂದ ಇಬ್ಬರ ಸೆರೆ
ಕನ್ನಡಪ್ರಭ ವಾರ್ತೆ ಬೆಂಗಳೂರುಬ್ಯಾಟರಾಯನಪುರ ಹೊಸಗುಡ್ಡದಹಳ್ಳಿಯಲ್ಲಿ ಇತ್ತೀಚೆಗೆ ನಡೆದಿದ್ದ ಒಂಟಿ ಮಹಿಳೆ ಕೊಲೆ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಂತರಾಜು ಹಾಗೂ ಮಂಜಪ್ಪ ಬಂಧಿತರು. ಆರೋಪಿಗಳು ವೆಂಕಟಲಕ್ಷ್ಮಮ್ಮ (63) ಎಂಬುವವರನ್ನು ಅ.24 ರಂದು ಕೊಲೆ ಮಾಡಿ ಪರಾರಿಯಾಗಿದ್ದರು. ಆಸ್ತಿಯ ವಿಚಾರಕ್ಕೆ ದೂರದ ಸಂಬಂಧಿಗಳೇ ಕೊಲೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಹತ್ಯೆಯ ಹಿಂದೆ ಇತರೆ ಆರೋಪಿಗಳ ಕೈವಾಡವಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವೆಂಕಟಲಕ್ಷ್ಮಮ್ಮ ಅವರ ಪತಿ ಹಾಗೂ ಮಗಳು ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಅವರು ಒಬ್ಬರೇ ಮನೆಯಲ್ಲಿ ವಾಸವಾಗಿದ್ದರು. ಅ.24 ರಂದು ಮಧ್ಯಾಹ್ನ ಮನೆಗೆ ಬಂದಿದ್ದ ಆರೋಪಿಗಳು ವೆಂಕಟಲಕ್ಷ್ಮಮ್ಮ ಅವರ ತಲೆಗೆ ಹರಿತವಾದ ಆಯುಧದಿಂದ ಹೊಡೆದು, ಹತ್ಯೆಗೈದು ಕೆಲವೊಂದು ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿದ್ದರು.
ಮರು ದಿನ ವೆಂಕಟಲಕ್ಷ್ಮಮ್ಮ ಹೊರಬಾರದರಿಂದ ಅನುಮಾನಗೊಂಡ ಪಕ್ಕದ ಮನೆಯವರು ಮನೆ ಬಳಿ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಅವರು ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬ್ಯಾಟರಾಯನಪುರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿ, ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಆಸ್ತಿ ವಿವಾದಕ್ಕೆ ಹತ್ಯೆ:
ವೆಂಕಟಲಕ್ಷ್ಮಮ್ಮ ಅವರ ತಾಯಿ ನಾಗಮ್ಮ ಅವರಿಗೆ ಸರ್ಕಾರದಿಂದ ಬೆಂಗಳೂರು ಅರೆಹಳ್ಳಿ ಗ್ರಾಮದ ಸರ್ವೇ ನಂ.8ರಲ್ಲಿ 1.30 ಎಕರೆ ಜಮೀನು ಮಂಜೂರು ಆಗಿತ್ತು. ಈ ಸಂಬಂಧ ನಗರದ ಸಿವಿಲ್ ನ್ಯಾಯಾಲಯದಲ್ಲಿ ಸಂಬಂಧಿಕರು ದಾವೆ ಹೂಡಿದ್ದರು. ಈ ಮಧ್ಯೆ ತಮ್ಮ ಜಮೀನನ್ನು ಯಾರೋ ಅತಿಕ್ರಮಿಸಿದ್ದಾರೆ ಎಂದು ವೆಂಕಟಲಕ್ಷ್ಮಮ್ಮ ಅವರು ಇದೇ ವರ್ಷದ ಜು.26 ರಂದು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ವೆಂಕಟಲಕ್ಷ್ಮಮ್ಮ ಅವರಿಗೆ ಐದು ಜನ ಸಹೋದರ ಸಹೋದರಿಯರು ಇದ್ದು, ಆಸ್ತಿ ವಿಚಾರವಾಗಿ ವೆಂಕಟಲಕ್ಷ್ಮಮ್ಮ ಹಾಗೂ ಸಹೋದರರ ಮಕ್ಕಳ ಮಧ್ಯೆ ಗಲಾಟೆ ಆಗಿತ್ತು. ಹಾಗಾಗಿ ಸಂಬಂಧಿಕರೇ ವೆಂಕಟಲಕ್ಷ್ಮಮ್ಮ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದರು. ವೆಂಕಟಲಕ್ಷ್ಮಮ್ಮ ಅವರಿಗೆ ಯಾರು ಇಲ್ಲ ಹೀಗಾಗಿ ಅವರನ್ನು ಕೊಂದರೆ ಇಡೀ ಆಸ್ತಿ ನಮ್ಮದಾಗುತ್ತದೆ ಎಂಬ ದುರಾಸೆಯಿಂದ ಆರೋಪಿಗಳು ಕೃತ್ಯ ಎಸಗಿರುವುದು ತನಿಖೆಯಿಂದ ಪತ್ತೆಯಾಗಿದೆ.
ಪೋಟೊ)) ಸಿಟಿ- ಮರ್ಡರ್))