ಮನೆಯಲ್ಲಿ ತನ್ನ ಮಗಳ ಜತೆ ಏಕಾಂತದಲ್ಲಿದ್ದ ಕೆಲಸಗಾರನನ್ನು ಹಿಂಸಿಸಿ ಹತ್ಯೆಗೈದ ಬೀದಿಬದಿ ವ್ಯಾಪಾರಿಯೊಬ್ಬನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆಯಲ್ಲಿ ತನ್ನ ಮಗಳ ಜತೆ ಏಕಾಂತದಲ್ಲಿದ್ದ ಕೆಲಸಗಾರನನ್ನು ಹಿಂಸಿಸಿ ಹತ್ಯೆಗೈದ ಬೀದಿಬದಿ ವ್ಯಾಪಾರಿಯೊಬ್ಬನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೋಗಿಲು ನಿವಾಸಿ ಕಿರಣ್ (23) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಮಾಲಿಕ ಆನಂದ್‌ ಬಂಧನವಾಗಿದೆ. 2 ದಿನಗಳಿಂದ ಮನೆಯಲ್ಲಿ ಕೂಡಿ ಹಾಕಿ ಹಲ್ಲೆಯಿಂದ ಅರೆಪ್ರಜ್ಞನಾಗಿದ್ದ ಕಿರಣ್‌ನನ್ನು ಮಂಗಳವಾರ ರಾತ್ರಿ ಖಾಸಗಿ ಆಸ್ಪತ್ರೆಗೆ ಆನಂದ್ ಕರೆತಂದು ದಾಖಲಿಸಿದ್ದಾರೆ. ಆದರೆ ಆತನನ್ನು ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಕೂಡಲೇ ಈ ಘಟನೆ ಬಗ್ಗೆ ಪೊಲೀಸರಿಗೆ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದು ಆಸ್ಪತ್ರೆಗೆ ತೆರಳಿದ ಪೊಲೀಸರು, ಅಲ್ಲೇ ಇದ್ದ ಆನಂದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯ ಬಯಲಾಗಿದೆ.

ಏಕಾಂತದಲ್ಲಿದ್ದ ಮಗಳ ಕಂಡು ಅಪ್ಪ ಕೆಂಡ

ಆರೋಪಿ ಆನಂದ್ ಮೂಲತಃ ತಮಿಳುನಾಡಿನವನಾಗಿದ್ದು, ಕೋಗಿಲು ಸಮೀಪ ತನ್ನ ಪತ್ನಿ ಹಾಗೂ ಮಕ್ಕಳ ಜತೆ ಆತ ನೆಲೆಸಿದ್ದ. ಅಲ್ಲೇ ರಸ್ತೆ ಬದಿಯಲ್ಲಿ ಸಿಹಿ ಜೋಳ (ಸ್ವಿಟ್‌ ಪಾಪ್ ಕಾರ್ನ್‌) ಮಾರಾಟ ಮಾಡುತ್ತ ಆನಂದ್ ಜೀವನ ಸಾಗಿಸುತ್ತಿದ್ದ. ಈತನ ಬಳಿ ಕೇರಳ ಮೂಲದ ಕಿರಣ್ ಕೆಲಸ ಮಾಡುತ್ತಿದ್ದ. ಸಭ್ಯ ನಡವಳಿಕೆಯಿಂದ ಮಾಲೀಕನ ಕುಟುಂಬದ ವಿಶ್ವಾಸವನ್ನು ಕಿರಣ್ ಸಂಪಾದಿಸಿದ್ದ. ಈ ಒಡನಾಟದಲ್ಲೇ ಆನಂದ್ ಪುತ್ರಿ ಜತೆ ಆತನಿಗೆ ಪ್ರೇಮವಾಯಿತು. ಮೈಸೂರಿನಲ್ಲಿ ಆಕೆ ವ್ಯಾಸಂಗ ಮಾಡುತ್ತಿದ್ದಳು. ಇತ್ತೀಚಿಗೆ ಈ ಪ್ರೇಮದ ವಿಷಯವು ಆನಂದ್‌ ಗಮನಕ್ಕೆ ಬಂದಿತು. ಆದರೆ ಬಹಿರಂಗವಾಗಿ ಹೇಳದೆ ಗೌಪ್ಯವಾಗಿ ಮಗಳು ಹಾಗೂ ಕೆಲಸಗಾರ ಮೇಲೆ ಆತ ನಿಗಾವಹಿಸಿದ್ದ.

3 ದಿನಗಳ ಹಿಂದೆ ದಸರಾ ರಜೆಗೆ ಮೈಸೂರಿನಿಂದ ಮಗಳು ಮನೆಗೆ ಮರಳಿದ ಬಳಿಕ ಆನಂದ್ ಸೂಕ್ಷ್ಮವಾಗಿ ಚಲನವಲನ ಎಚ್ಚರಿಕೆ ವಹಿಸಿದ್ದ. 2 ದಿನಗಳ ಹಿಂದೆ ಪತ್ನಿ ಹಾಗೂ ಇನ್ನಿಬ್ಬರ ಮಕ್ಕಳ ಜತೆ ತಮಿಳುನಾಡಿನ ಸಂಬಂಧಿಕರ ಮನೆಗೆ ಹೋಗುವುದಾಗಿ ಸುಳ್ಳು ಹೇಳಿ ಆನಂದ್ ಮನೆಯಿಂದ ಹೊರಟಿದ್ದ. ಇತ್ತ ತನ್ನ ತಂದೆ-ತಾಯಿ ಮನೆಯಿಂದ ಹೊರ ಹೋದ ಕೂಡಲೇ ಪ್ರಿಯಕರನನ್ನು ಆಕೆ ಮನೆಗೆ ಕರೆಸಿಕೊಂಡಿದ್ದಳು. ಕೆಲ ಹೊತ್ತಿನಲ್ಲಿ ದಿಢೀರನೇ ಮನೆಗೆ ಮರಳಿದಾಗ ಕೋಣೆಯಲ್ಲಿ ಮಗಳನ್ನು ಕೆಲಸಗಾರನ ಜತೆ ಏಕಾಂತದಲ್ಲಿದ್ದನ್ನು ನೋಡಿ ಆನಂದ್ ಕೆಂಡಮಂಡಲನಾಗಿದ್ದಾನೆ.

ತಕ್ಷಣವೇ ಮಗಳನ್ನು ಪತ್ನಿ ಜತೆ ಚಿಕ್ಕಬಳ್ಳಾಪುರದ ಸಂಬಂಧಿಕರ ಮನೆಗೆ ಕಳುಹಿಸಿದ ಆತ, ತನ್ನ ಮನೆಯಲ್ಲೇ ಕೆಲಸಗಾರನ್ನು ಕೂಡಿ ಹಾಕಿ ಮನಬಂದಂತೆ ಥಳಿಸಿದ್ದಾನೆ. ಬ್ಯಾಟ್ ಹಾಗೂ ಪೈಪ್‌ಗಳಿಂದ ಆತ ಚಚ್ಚಿದ್ದಾನೆ. 2 ದಿನಗಳ ನಿರಂತರ ಹಲ್ಲೆಯಿಂದ ಕಿರಣ್ ನಿತ್ರಾಣನಾಗಿದ್ದಾನೆ. ಆಗ ಮಂಗಳವಾರ ರಾತ್ರಿ ಆತನ ಕಿಬ್ಬೊಟ್ಟೆಗೆ ಆನಂದ್ ಒದ್ದಿದ್ದಾನೆ. ಈ ಹೊಡೆತಕ್ಕೆ ಕಿರಣ್ ಅರೆಪ್ರಜ್ಞನಾಗಿ ಕುಸಿದಿದ್ದಾನೆ.

ಇದರಿಂದ ಕಂಗಾಲಾದ ಆನಂದ್‌, ತಕ್ಷಣವೇ ಆಟೋದಲ್ಲಿ ಗಾಯಾಳುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾನೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ನಡೆಸುವ ಹೊತ್ತಿಗೆ ಆತ ಕೊನೆಯುಸಿರೆಳೆದಿದ್ದಾನೆ. ಹಲ್ಲೆಯಿಂದ ಯುವಕ ಮೃತಪಟ್ಟಿದ್ದಾನೆ ಎಂದು ಯಲಹಂಕ ಠಾಣೆಗೆ ಆಸ್ಪತ್ರೆ ಸಿಬ್ಬಂದಿ ವರದಿ ಮಾಡಿದ್ದಾರೆ. ಈ ಮಾಹಿತಿ ತಿಳಿದ ತಕ್ಷಣವೇ ಆಸ್ಪತ್ರೆಗೆ ತೆರಳಿದ ಪೊಲೀಸರು, ಅಲ್ಲೇ ಇದ್ದ ಆನಂದ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.