ಕಡಿಮೆ ಬೆಲೆಗೆ ವಿಮಾನದ ಟೆಕೆಟ್‌ ಕೊಡಿಸುತ್ತೇನೆಂದು ಮಹಿಳೆಯಿಂದ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಮತ್ತು ನಗದು ಪಡೆದು ಪರಾರಿ ಆಗಿದ್ದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಡಿಮೆ ಬೆಲೆಗೆ ವಿಮಾನದ ಟೆಕೆಟ್‌ ಕೊಡಿಸುತ್ತೇನೆಂದು ಮಹಿಳೆಯಿಂದ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಮತ್ತು ನಗದು ಪಡೆದು ಪರಾರಿ ಆಗಿದ್ದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ಚನುವರ್ ಅಲಿ (36) ಬಂಧಿತ. ಆರೋಪಿಯಿಂದ 17 ಲಕ್ಷ ರು. ಮೌಲ್ಯದ 117 ಗ್ರಾಂ ತೂಕದ ಚಿನ್ನಾಭರಣ, 71.83 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ ಅ.14ರಂದು ರಾಜಸ್ಥಾನ ಮೂಲದ ಪುಷ್ಪ ಎಂಬುವರನ್ನು ಬಾಗಲೂರು ಬಳಿಯ ಮಯೂರಾ ಬೇಕರಿ ಬಳಿ ವಂಚಿಸಿ ಪರಾರಿ ಆಗಿದ್ದ.

ನಾಲ್ಕೈದು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ ಆರೋಪಿ, ಮೊದಲು ವಿಮಾನ ನಿಲ್ದಾಣದ ಕ್ಯಾಂಟೀನ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. 1 ವರ್ಷದ ಹಿಂದೆ ಕೆಲಸ ಬಿಟ್ಟು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. 3 ತಿಂಗಳ ಹಿಂದೆ ಆ ಕೆಲಸವನ್ನು ಕೂಡ ಬಿಟ್ಟು, ಸಣ್ಣ-ಪುಟ್ಟ ಕೆಲಸ ಮಾಡಿ ಜೀವನ ನಡೆಸುತ್ತಿದ್ದ. ದೇವನಹಳ್ಳಿಯ ಭಟ್ಟರಮಾರೇನಹಳ್ಳಿ ಗ್ರಾಮದಲ್ಲಿ ಸ್ನೇಹಿತರ ಜತೆ ವಾಸವಾಗಿದ್ದ.

ವಿದ್ಯಾರಣ್ಯಪುರದಲ್ಲಿರುವ ಸಂಬಂಧಿಯೊಬ್ಬರಿಗೆ ಅನಾರೋಗ್ಯದ ಕಾರಣ ಅವರನ್ನು ನೋಡಲು ರಾಜಸ್ಥಾನದಿಂದ ಬಂದಿದ್ದ ಪುಷ್ಪ ಮತ್ತು ಈಕೆಯ ಸಹೋದರ ರಮೇಶ್‌ ಅ.14ರಂದು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಬಂದು ಟೆಕೆಟ್ ಪಡೆಯಲು ಹೋಗಿದ್ದಾರೆ. ಆಗ ಮಹಿಳೆಗೆ ಟಿಕೆಟ್ ಸಿಕ್ಕಿಲ್ಲ. ಇದೇ ವೇಳೆ ರೈಲ್ವೆ ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಆರೋಪಿ, ಮಹಿಳೆಯನ್ನು ಪರಿಚಯಿಸಿಕೊಂಡು, ನನಗೂ ಟಿಕೆಟ್ ಸಿಕ್ಕಿಲ್ಲ. ನಾನು ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ನಿಮಗೆ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಕೊಡಿಸುತ್ತೇನೆ ಎಂದು ನಂಬಿಸಿದ್ದಾನೆ.

ಆತನ ಮಾತು ನಂಬಿದ ಮಹಿಳೆ, ಕ್ಯಾಬ್ ಬುಕ್ ಮಾಡಿಕೊಂಡು ಆರೋಪಿಯನ್ನು ಏರ್‌ಪೋರ್ಟ್‌ಗೆ ಕರೆದೊಯ್ಯುತ್ತಿದ್ದರು. ಮಾರ್ಗ ಮಧ್ಯೆ ಬಾಗಲೂರು ಬಳಿಯ ಮಯೂರಾ ಬೇಕರಿ ಬಳಿ ಏರ್‌ಪೋರ್ಟ್‌ನಲ್ಲಿ ಚಿನ್ನಾಭರಣ ತೆಗೆದುಕೊಂಡು ಹೋಗುವುದಕ್ಕೆ ಅನುಮತಿ ಇಲ್ಲ. ಹೀಗಾಗಿ ಮೈಮೇಲಿದ್ದ ಚಿನ್ನಾಭರಣ ಹಾಗೂ ನಗದು ಇದ್ದ ಪರ್ಸ್‌ನ್ನು ತೆಗೆಯಿಸಿ ತನ್ನ ಬ್ಯಾಗನಲ್ಲಿ ಇರಿಸಿಕೊಂಡಿದ್ದ. ನಂತರ ಏರ್‌ಪೋರ್ಟ್ ಹೊರಗಡೆ ಮಹಿಳೆ ಮತ್ತು ಅವರ ಸಹೋದರನನ್ನು ಕ್ಯಾಬ್‌ನಿಂದ ಇಳಿಸಿ, ಇಲ್ಲಿಯೇ ಇರುವಂತೆ ಸೂಚಿಸಿ ಪರಾರಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.