ಡೇಟಿಂಗ್ ಆ್ಯಪ್‌ ಮೂಲಕ ಪರಿಚಯವಾದ ಯುವಕನನ್ನು ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್‌ ಸಿಟಿಯ ತೇಗೂರು ನಿವಾಸಿ ರಿಶಿರಾಜ್ ರಾಜ್‌ ಸಿಂಗ್‌ (18), ಹೆಬ್ಬಗೋಡಿಯ ವಂಶಿ (21), ಎಲೆಕ್ಟ್ರಾನಿಕ್‌ ಸಿಟಿ ಬೇಗೂರು ಕೊಪ್ಪದ ನಿವಾಸಿ ವೆಂಕಟೇಶ್ (25), ವಡ್ಡರಪಾಳ್ಯದ ದರ್ಶನ್‌ (24) ಬಂಧಿತರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆರೋಪಿಗಳಿಂದ 1 ಮೊಬೈಲ್‌, ಕೃತ್ಯಕ್ಕೆ ಬಳಸಿದ 1 ಬೈಕ್‌ ಅನ್ನು ಜಪ್ತಿ ಮಾಡಲಾಗಿದೆ. ಆದರೆ ದೂರುದಾರ ಸುಳ್ಳು ದೂರು ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೆಟ್ಟದಾಸನಪುರ ಮುಖ್ಯರಸ್ತೆಯ ಪೋಡು ರಸ್ತೆಯ ನಿವಾಸಿಯೊಬ್ಬ ಯುವಕರ ಡೇಟಿಂಗ್‌ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡಿದ್ದ. ಈ ವೇಳೆ ಅದರಲ್ಲಿ ಪರಿಚಯವಾದ ಆರೋಪಿಗಳ ಪೈಕಿ ವಂಶಿ ಎಂಬಾತನಿಗೆ ಲೋಕೇಶನ್‌ ಕಳುಹಿಸಿ, ಆತನ ಜತೆ ನಿರ್ಜನ ಪ್ರದೇಶಕ್ಕೆ ಹೋಗಿದ್ದು, ದೂರುದಾರನ ಬಳಿ ಹಣ ಇರುವುದನ್ನು ಖಾತ್ರಿ ಪಡಿಸಿಕೊಂಡ ಆತ ಇತರೆ ಆರೋಪಿಗಳನ್ನು ಸ್ಥಳಕ್ಕೆ ಕರೆಸಿಕೊಂಡಿದ್ದ. ನಂತರ ನಾಲ್ವರು ಸೇರಿ ದೂರುದಾರನ ಮೇಲೆ ಹಲ್ಲೆ ನಡೆಸಿ, ಮೊಬೈಲ್‌, ಯುಪಿಐ ಪಾಸ್‌ವರ್ಡ್‌ ಪಡೆದು ಸಾವಿರಾರು ರು. ಅನ್ನು ವರ್ಗಾವಣೆ ಮಾಡಿಕೊಂಡಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮರೆಮಾಚಿ ಸುಳ್ಳು ದೂರು ನೀಡಿದ್ದ:

ದೂರುದಾರ ಅಸಲಿ ಘಟನೆಯನ್ನು ಮರೆಮಾಚಿ ಸುಳ್ಳು ದೂರು ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದೂರುದಾರ ಅ.13ರಂದು ರಾತ್ರಿ 9 ಗಂಟೆ ಸುಮಾರಿಗೆ ಹೋಟೆಲ್‌ನಿಂದ ಊಟ ಪಾರ್ಸೆಲ್ ತೆಗೆದುಕೊಂಡು ಪೋಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಆಗ ಬೈಕ್‌ನಲ್ಲಿ ಬಂದವರು ನನ್ನನ್ನು ಅಡ್ಡ ಹಾಕಿದ್ದು, ಬಳಿಕ ಬಟ್ಟೆಯಿಂದ ಬಾಯಿ ಮುಚ್ಚಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ಬಳಿಕ ಕಣ್ಣು ಬಿಟ್ಟಾಗ ಸುತ್ತ-ಮುತ್ತ ಗಿಡಗಂಟೆಗಳು ಬೆಳೆದುಕೊಂಡಿತ್ತು. ನಂತರ ನಾಲ್ಕೈದು ಮಂದಿ ಯುವಕರು, ನನ್ನ ಮೇಲೆ ಹಲ್ಲೆ ನಡೆಸಿ, ಚಾಕು ತೋರಿಸಿ, ಬಿಯರ್ ಬಾಟಲ್‌ ಹಾಗೂ ಕೈಗಳಿಂದ ಹಲ್ಲೆ ನಡೆಸಿ ಮೊಬೈಲ್‌ ಕಸಿದುಕೊಂಡಿದ್ದರು. ಯುಪಿಐ ಪಾಸ್‌ವರ್ಡ್‌ ತಿಳಿದುಕೊಂಡು 37 ಸಾವಿರ ರು. ವರ್ಗಾವಣೆ ಮಾಡಿಕೊಂಡಿದ್ದರು ದೂರು ನೀಡಿದ್ದರು. ಆದರೆ, ತನಿಖೆಯಲ್ಲಿ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ವಂಶಿ ಜತೆ ದೂರುದಾರ ಹೋಗಿರುವುದು ಬೆ‍ಳಕಿಗೆ ಬಂದಿದೆ.