ಮಹಿಳೆ ಎಂಬ ಕಾರಣ ಜಾಮೀನು ನೀಡಲು ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ‌ಪ್ರಿಯಕರನ‌ ಜೊತೆಗೆ‌ ಸಂಬಂಧ ಮುಂದುವರಿಸಲು ಅಡ್ಡಿಆಗಿದ್ದಾರೆಂದು ಪತಿಯನ್ನು ಕೊಲೆ ಮಾಡಿಸಿದ‌ ಆರೋಪ ಎದುರಿಸುತ್ತಿರುವ ಮಹಿಳೆಯೊಬ್ಬಳಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ.

ಬೆಂಗಳೂರು : ಮಹಿಳೆ ಎಂಬ ಕಾರಣ ಜಾಮೀನು ನೀಡಲು ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ‌ಪ್ರಿಯಕರನ‌ ಜೊತೆಗೆ‌ ಸಂಬಂಧ ಮುಂದುವರಿಸಲು ಅಡ್ಡಿಆಗಿದ್ದಾರೆಂದು ಪತಿಯನ್ನು ಕೊಲೆ ಮಾಡಿಸಿದ‌ ಆರೋಪ ಎದುರಿಸುತ್ತಿರುವ ಮಹಿಳೆಯೊಬ್ಬಳಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ.

ಪತಿ‌ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ನಿವಾಸಿ ಸುನಿತಾ ಎಂಬಾಕೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನುತಿರಸ್ಕರಿಸಿದ ನ್ಯಾ.ವಿ. ಶ್ರೀಷಾನಂದ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.‌ ಘಟನೆಯ ವಾಸ್ತವಾಂಶ ಪರಿಶೀಲಿಸಿದರೆ, ಮೊದಲ ಆರೋಪಿ ಮತ್ತು ಅರ್ಜಿದಾರ ಮಹಿಳೆ‌‌ (ಎರಡನೇ ಆರೋಪಿ) ಅಕ್ರಮ ಸಂಬಂಧ ಹೊಂದಿದ್ದರು.‌ ಮೊದಲನೇ ಆರೋಪಿಯು ಅರ್ಜಿದಾರೆಯನ್ನು ಪೋಷಣೆ ಮಾಡುವುದಾಗಿ ಭರವಸೆ ನೀಡಿದ್ದ. ಈ ಇಬ್ಬರು ಜೀವನ ಸಾಗಿಸಲು ಅಡ್ಡಿಯಾಗಿದ್ದಾರೆ ಎಂಬ ಕಾರಣಕ್ಕೆ‌ಅರ್ಜಿದಾರೆಯ ಪತಿಯನ್ನು ಕೊಲೆ ಮಾಡಲಾಗಿದೆ. ಪ್ರಕರಣದ ಮುಖ್ಯ ಸಾಕ್ಷಿದಾರರ ವಿಚಾರಣೆ ಬಾಕಿ‌‌ಯಿದೆ. ಹಾಗಾಗಿ, ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡಲಾಗದು ಎಂದು‌ ಪೀಠ ಹೇಳಿದೆ‌.

ಜಾಮೀನು ಮಂಜೂರು

ಮಹಿಳೆ ಆಗಿರುವ ಕಾರಣ ಪರಿಗಣಿಸಿ ಜಾಮೀನು ಮಂಜೂರು ಮಾಡಬೇಕೆಂಬ ಅರ್ಜಿದಾರೆಯ ಪರ ವಕೀಲರ ವಾದ ಒಪ್ಪದ ಪೀಠ, ಮಹಿಳೆ ಎಂಬ ಕಾರಣವು ಜಾಮೀನು ಮಂಜೂರು ಮಾಡಲು ಸಾಕಾಗುವುದಿಲ್ಲ. ದೋಷಾರೋಪ‌ ಪಟ್ಟಿ ಸಲ್ಲಿಕೆ ಆಗಿದೆ ಎಂಬ ಅಂಶ ಪರಿಗಣಿಸಿ ಜಾಮೀನು ನೀಡಲು ಸಾಧ್ಯವಿಲ್ಲ. ಆದರೆ, ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿದ ನಂತರ ಸನ್ನಿವೇಶ ಬದಲಾದ ಆಧಾರದಲ್ಲಿ ಅರ್ಜಿದಾರೆ ಮತ್ತೊಮ್ಮೆ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಏನಿದು ಪ್ರಕರಣ?:

ಆಟೋ ಚಾಲಕ ರವಿಕುಮಾರ್ ಮೃತದೇಹವು 2025ರ ಜು.20ರಂದು ಚಿತ್ರದುರ್ಗದ ಶಿವಮೂರ್ತಿ ಬಡಾವಣೆಯಲ್ಲಿ ಪತ್ತೆಯಾಗಿತ್ತು. ಮೃತರ ತಲೆ ಮತ್ತು ಗುಪ್ತಾಂಗದ ಭಾಗಕ್ಕೆ ತೀವ್ರ ಗಾಯಗಳಾಗಿದ್ದವು. ಪ್ರಕರಣ ಸಂಬಂಧ ಮೃತರ ಮಗ ವಿಷ್ಣು ಚಿತ್ರದುರ್ಗದ ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಮೃತನ ಮಗಳು ಮತ್ತು ಅಳಿಯನ ನಡುವೆ ಮನಸ್ತಾಪವಿತ್ತು. ಮಗಳು ತಂದೆಯ ಮನೆ ಸೇರಿರುವ ಕಾರಣಕ್ಕೆ ಮೊದಲಿಗೆ ಅಳಿಯನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿದ ಬಳಿಕ, ಅರ್ಜಿದಾರೆ ಸುನಿತಾ (ಮೃತರ ಪತ್ನಿ) ಮತ್ತು ಗಣೇಶ್ ನಡುವೆ ಅಕ್ರಮ ಸಂಬಂಧವಿತ್ತು. ಅಕ್ರಮ ಸಂಬಂಧವನ್ನು ಮುಂದುವರೆಸಲು ರವಿಕುಮಾರ್‌ (ಮೃತರು) ಅಡ್ಡಿಯಾಗಿದ್ದರು. ಇದೇ ಕಾರಣದಿಂದ ಅವರು ಪಿತೂರಿ ನಡೆಸಿದ ರವಿಕುಮಾರ್‌ನನ್ನು ಕೊಲೆ‌ ಮಾಡಿದ್ದಾರೆ ಎಂದು ತಿಳಿದು ಬಂದಿತ್ತು.