ಕನ್ನಡಪ್ರಭ ವಾರ್ತೆ ನಿಡಗುಂದಿಕಳೆದ ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಗೆ ನೆನೆದಿದ್ದ ಮಣ್ಣಿನ ಮನೆಯ ಚಾವಣಿ ಏಕಾಏಕಿ ಕುಸಿದು ಬಿದ್ದು ಓರ್ವ ಮಹಿಳೆ ದಾರುಣವಾಗಿ ಅಸುನೀಗಿರುವ ಘಟನೆ ಗುರುವಾರ ಬೆಳಗಿನಜಾವ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ನಿಡಗುಂದಿ

ಕಳೆದ ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಗೆ ನೆನೆದಿದ್ದ ಮಣ್ಣಿನ ಮನೆಯ ಚಾವಣಿ ಏಕಾಏಕಿ ಕುಸಿದು ಬಿದ್ದು ಓರ್ವ ಮಹಿಳೆ ದಾರುಣವಾಗಿ ಅಸುನೀಗಿರುವ ಘಟನೆ ಗುರುವಾರ ಬೆಳಗಿನಜಾವ ಸಂಭವಿಸಿದೆ. ಪಟ್ಟಣದ ಗೌರೀಶ್ವರ ದೇವಸ್ಥಾನ ಸಮೀಪದ ಕಾಲನಿಯ ಮಹಾದೇವಿ ವಾರದ (55) ಮೃತ ಮಹಿಳೆ. ಈ ಘಟನೆಯಿಂದ ಇಡೀ ಕಾಲನಿ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.

ಘಟನೆ ವಿವರ: ಗುರುವಾರ ಬೆಳಗಿನ ಜಾವ 3.30ರ ಸುಮಾರಿಗೆ ಮನೆಯ ಚಾವಣಿ ಮಳೆಯಿಂದ ನೆನೆದು ಹೋಗಿತ್ತು. ರಾತ್ರಿ ಕುಟುಂಬಸ್ಥರು ನಿದ್ರೆಯಲ್ಲಿದ್ದಾಗ ಭಾರಿ ಶಬ್ದದೊಂದಿಗೆ ದೊಡ್ಡ ಗಾತ್ರದ ಚಾವಣಿ ಕುಸಿದು ಬಿದ್ದಿದೆ. ಈ ವೇಳೆ ಕೋಣೆಯಲ್ಲಿ ಮಲಗಿದ್ದ ಮಹಾದೇವಿ ಅವರ ಮೇಲೆ ಮಣ್ಣು ಹಾಗೂ ಮರದ ದಿಮ್ಮಿಗಳು ಬಿದ್ದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ ಮಹಾದೇವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತಳ ಪತಿ ಶಿವಾನಂದ ವಾರದ ಅವರು ಮನೆಯ ಹೊರಭಾಗದಲ್ಲಿ ಮಲಗಿದ್ದರು. ಭಾರೀ ಶಬ್ದಕ್ಕೆ ಬೆಚ್ಚಿಬಿದ್ದು ಒಳಗೆ ಬಂದು ನೋಡಿದಾಗ ಈ ಅವಘಡ ನಡೆದಿತ್ತು. ಕೂಡಲೇ ಕುಟುಂಬಸ್ಥರು ಮತ್ತು ಸ್ಥಳೀಯರ ಸಹಾಯದಿಂದ ಮಹಾದೇವಿ ಅವರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ. ಬೆಳಕು ಹರಿಯುತ್ತಿದ್ದಂತೆ ಮಣ್ಣಿನ ರಾಶಿ ಹಾಗೂ ಅವಶೇಷಗಳ ಮಧ್ಯೆ ಸಿಲುಕಿದ್ದ ಮಹಾದೇವಿ ಅವರನ್ನು ಹೊರತೆಗೆದಲು ಸ್ಥಳೀಯರು ಹರಸಾಹಸಪಟ್ಟರು. ಆದರೆ, ಅಷ್ಟರಲ್ಲಾಗಲೇ ಅವರು ಜೀವ ಕಳೆದುಕೊಂಡಿದ್ದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

ಅಂದಾಜು ನೂರು ವರ್ಷದ ಹಳೆಯ ಮನೆ ಇದಾಗಿದ್ದು, ಮನೆ ದುರ್ಬಲವಾಗಿದೆ ಎನ್ನುವುದು ಗೊತ್ತಿರಲಿಲ್ಲ ಎಂದು ಸ್ಥಳೀಯರು ದುಃಖ ವ್ಯಕ್ತಪಡಿಸಿದರು.

ಘಟನೆಯ ಮಾಹಿತಿ ಪಡೆದ ಬಸವನಬಾಗೇವಾಡಿ ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ, ಪಿಎಸ್‌ಐ ಶಿವಾನಂದ ಪಾಟೀಲ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರತಾಪ್ ಕೊಡಗೆ, ಕಂದಾಯ ನಿರೀಕ್ಷಕ ಸಲಿಂ ಎಲಗೋಡ್ ಹಾಗೂ ಗ್ರಾಮ ಆಡಳಿತಾಧಿಕಾರಿ ನಾನಾಗೌಡ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಧಿಕಾರಿಗಳು ಮೃತಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ದೊರೆಯುವ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು.

ಈ ಕುರಿತು ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.